Rishabh pant : ಭೀಕರ ರಸ್ತೆ ಅಪಘಾತ; ಕ್ರಿಕೆಟಿಗ ರಿಷಬ್ ಪಂತ್ ಸ್ಥಿತಿ ಗಂಭೀರ….
ಭೀಕರ ಕಾರು ಅಪಘಾತದಲ್ಲಿ ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದು, ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂತಿರುಗುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪಂತ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಷಬ್ ಪಂತ್ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂತಿರುಗುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಕಾರು ಓಡಿಸುತ್ತಿದ್ದ ಪಂತ್ ಅವರು ನಿದ್ರೆಗೆ ಜಾರಿದ್ದರ ಪರಿಣಾಮ ಕಾರು ರೋಡ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರಿಷಬ್ ಪಂತ್ ಕಾರಿನ ವಿಂಡ್ಸ್ಕ್ರೀನ್ ಒಡೆದು ಹೊರಬಂದರು ಎಂದು ಹೇಳಲಾಗಿದೆ.
ಘಟನೆಯಲ್ಲಿ ರಿಷಬ್ ಪಂತ್ ಅವರ ಹಣೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆ ಪಂತ್ ಅವರನ್ನ ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಕುರಿತಂತೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪ್ನಾ ಕಿಶೋರ್ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದಾರೆ. ಸದ್ಯ ರಿಷಬ್ ಪಂತ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ಮ್ಯಾಕ್ಸ್ ಡೆಹ್ರಾಡೂನ್ಗೆ ಕಳುಹಿಸಲಾಗಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ.ಸುಶೀಲ್ ನಗರ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಬ್ ಅವರ ಕಾರು ರೇಲಿಂಗ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು. ಅದೇ ಸಮಯದಲ್ಲಿ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ರಿಷಬ್ ಪಂತ್ ಅವರನ್ನು ದೆಹಲಿ ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.
Rishabh pant : Terrible road accident; Cricketer Rishabh Pant’s condition is serious…