Rishabh Shetty : ಕಾಡಿನ ಜನರ ಕಷ್ಟಕ್ಕೆ ನಿಂತ ಕಾಂತಾರ ಹೀರೋ : ಸಿ ಎಂ ಬಸವರಾಜ್ ಬೊಮ್ಮಾಯಿಗೆ ಮನವಿ…
ನಟ ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರದ ಮೂಲಕ ಕಾಡಿನ ಜನರ ಕಷ್ಟಗಳನ್ನ ಮನಮುಟ್ಟುವಂತೆ ವಿವರಿಸಿದ್ದರು. ಇದನ್ನ ಕೇವಲ ಸಿನಿಮಾ ಮೆಸೆಜ್ ಗೆ ಅಷ್ಟೆ ಸೀಮಿತ ಮಾಡದ ರಿಷಬ್ ಶೆಟ್ಟಿ ನಿಜ ಜೀವನದಲ್ಲಿಯೂ ಕಾಡಿನ ಜನರ ಕಷ್ಟಕ್ಕೆ ಕೈ ಜೋಡಿಸಲು ಮುಂದಾಗಿದ್ದಾರೆ. ಈ ಕುರಿತು ರಿಷಭ್ ಶೆಟ್ಟಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿ 20 ಅಂಶಗಳ ಮನವಿಯನ್ನ ಸಲ್ಲಿಸಿದ್ದಾರೆ.
ಸಿ ಎಂ ಬೊಮ್ಮಾಯಿ ಅವರ ಭೇಟಿಯ ಬಗ್ಗೆ ಟ್ವೀಟರ್ ನಲ್ಲಿ ವಿಡಿಯೋ ಮೂಲಕ ರಿಷಭ್ ಶೆಟ್ಟಿ ತಿಳಿಸಿದ್ದಾರೆ. “ಕಾಂತಾರ ಸಿನಿಮಾದ ನಂತರ ಕಾಡಂಚಿನ ಜನರು ಮತ್ತು ಕಾಡಿನ ಜೊತೆ ಸಮಯ ಕಳೆಯುತ್ತಾ, ಅರಣ್ಯ ಇಲಾಖೆಯವರ ಜೊತೆ ಬರೆಯುತ್ತಾ, ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಾ ಒಂದಷ್ಟು ಜರ್ನಿ ಮಾಡಿದೆ. ಕೃಷಿಕರಿಗೆ ಕಾಡಾನೆ ಸಮಸ್ಯೆ ಇದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ವಾಚರ್ಗಳು ಸಾಕಷ್ಟು ರಿಸ್ಕ್ ತೆಗೆದುಕೊಂಡು ಕಾಡನ್ನು ಉಳಿಸುತ್ತಿದ್ದಾರೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರ ಜೊತೆಗೆ ಒಂದಷ್ಟು ಚರ್ಚೆ ಮಾಡಿದ್ದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಆಗಬೇಕಾದ ಕೆಲಸ ಸಾಕಷ್ಟು ಇವೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಭರ್ತಿ ಆಗಬೇಕು. ವಾಚರ್ಗಳ ನೇಮಕಾತಿ ಆಗಬೇಕು. ಆ ರೀತಿ 20 ಅಂಶಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಅವರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕೂಡ ಇತ್ತೀಚಿನ ದಿನಗಳಲ್ಲಿ ಕಾಡಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವಂತೆ ಆದೇಶ ನೀಡುವುದಾಗಿ ಅವರು ತಿಳಿಸಿದ್ದಾರೆ. ಇಂಥ ಮುಖ್ಯಮಂತ್ರಿಗಳನ್ನು ಪಡೆದಿದ್ದಕ್ಕೆ ನಾವೆಲ್ಲ ಧನ್ಯ. ಈ ರೀತಿಯ ಚಿಕ್ಕ ಸಮಸ್ಯೆಗಳನ್ನೂ ಕೂಡ ಗಮನಿಸಿ ಅದಕ್ಕೆ ಪರಿಹಾರ ಸಿಗುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
Rishabh Shetty: Kantara hero who stood for the hardships of forest people: appeal to CM Basavaraj Bommai…