ದೇಶದಲ್ಲಿ ಕೊರೊನಾಸುರನ ಹೊಡೆತಕ್ಕೆ ಜನರ ಬದುಕು ಬರ್ಬಾದ್ ಆಗಿಬಿಟ್ಟಿದೆ. ಕೊರೊನಾ ಸೋಂಕು ತಗಲುವ ಭೀತಿಯಲ್ಲಿ ಜನರು ಮನೆಯಲ್ಲೇ ಉಳಿಯುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರವೂ ದೇಶವನ್ನು ಲಾಕ್ ಡೌನ್ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆದರೂ ಅಲ್ಲಲ್ಲಿ ಜನರ ಓಡಾಟ ಕಂಡು ಬರುತ್ತಲೇ ಇದೆ. ನಗರಗಳ ಸಂಗತಿ ಇದಾದ್ರೆ ಹಳ್ಳಿಯ ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಒಪ್ಪಿ ಜನರೇ ತಮ್ಮ ಗ್ರಾಮಗಳನ್ನು ಸ್ವಯಂಪ್ರೇರಿತರಾಗಿ ಲಾಕ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಬಳ್ಳಾರಿಯ ಸಿದ್ದಾಪುರ….
ಹೌದು..! ಹೆಮ್ಮಾರಿ ಕೊರೊನಾ ಭೀತಿಯ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಸಿದ್ದಾಪುರದ ಗ್ರಾಮಸ್ಥರು, ತಮ್ಮೂರಿಗೆ ಸಂಪರ್ಕಿಸುವ ಎಲ್ಲಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೊನಾ ಹರಡಿಸಬೇಡಿ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾ ಹರಡೋದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರೇ ಊರಿಗೆ ಲಕ್ಷ್ಮಣ ರೇಖೆ ಎಳೆದುಕೊಂಡಿದ್ದಾರೆ.








