ರಾಬಿನ್ ಉತ್ತಪ್ಪಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನೋ ಯೋಚನೆ ಬಂದಿದ್ಯಾಕೆ…?
ರಾಬಿನ್ ಉತ್ತಪ್ಪ.. ಟೀಮ್ ಇಂಡಿಯಾದ ಆಟಗಾರ. ಆದ್ರೆ ಕಳೆದ ಐದು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವೇ ಸಿಕ್ಕಿಲ್ಲ. ಹಾಗೇ ಕರ್ನಾಟಕ ರಣಜಿ ತಂಡವನ್ನು ಬಿಟ್ಟು ಈಗ ಕೇರಳ ರಣಜಿ ತಂಡದ ಪರ ಆಡುತ್ತಿದ್ದಾರೆ. ಇದೀಗ ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಬಿನ್ ಉತ್ತಪ್ಪ ಅವರು ತಮ್ಮ ಕ್ರಿಕೆಟ್ ಬದುಕಿನ ಕೆಲವೊಂದು ಘಟನೆಗಳನ್ನು ಹೇಳಿಕೊಂಡಿದ್ದಾರೆ.
ರಾಬಿನ್ ಉತ್ತಪ್ಪ ಅಂದ್ರೆ ಬಿರುಸಿನ ಬ್ಯಾಟಿಂಗ್ ಮೂಲಕವೇ ಗಮನ ಸೆಳೆದವರು. ಹಾಗೇ ವಿಕೆಟ್ ಕೀಪಿಂಗ್ ಕೂಡ ಗೊತ್ತು. ಅದ್ರಲ್ಲೂ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡಿರುವ ಹೆಮ್ಮೆ ಕೂಡ ಅವರದ್ದಾಗಿದೆ. ಅದ್ಭುತ ಬ್ಯಾಟಿಂಗ್ ಹಾಗೂ ಪ್ರತಿಭಾವಂತ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಆಕ್ರಮಣಕಾರಿ ಪ್ರವೃತ್ತಿ ಹಾಗೂ ಧೈರ್ಯದಿಂದಲೇ ಮುನ್ನುಗ್ಗುವಂತಹ ರಾಬಿನ್ ಉತ್ತಪ್ಪ ಅವರಿಗೆ ಆ ಎರಡು ವರ್ಷದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆ ಬಂದಿದ್ದಂತೆ. ಈ ವಿಷ್ಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಅದು 2009ರಿಂದ 2011ರ ತನಕ. ತನ್ನ ಬದುಕಿನಲ್ಲೇ ಮರೆಯಾಲಾಗದಂತಹ ದಿನಗಳು. ಆಗ ನನ್ನಲ್ಲಿ ಸಾಕಷ್ಟು ಕೆಟ್ಟ ಯೋಚನೆಗಳು ಬಂದಿದ್ದವು. ಮಾನಸಿಕವಾಗಿ ನಾನು ಸಾಕಷ್ಟು ಖಿನ್ನನಾಗಿದ್ದೆ. ಅಷ್ಟೇ ಅಲ್ಲ, ಕೆಲವೊಂದು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನ್ನಿಸಿತ್ತು. ಒಂದು ಎರಡು, ಮೂರು ಅಂತ ಕೌಂಟ್ ಮಾಡಿಕೊಂಡು ಮನೆಯ ಬಾಲ್ಕನಿಯಿಂದ ಜಿಗಿಯಬೇಕು ಅನ್ನೋ ಯೋಚನೆಗಳು ಬಂದಿದ್ದವು. ಆದ್ರೆ ಕ್ರಿಕೆಟ್ ಆಟ ನನ್ನ ಎಲ್ಲಾ ಕೆಟ್ಟ ಯೋಚನೆಗಳನ್ನು ದೂರ ಮಾಡಿತ್ತು ಎಂದು ರಾಬಿನ್ ಉತ್ತಪ್ಪ ಅಂದಿನ ಕೆಟ್ಟ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು, ಆ ಎರಡು ವರ್ಷಗಳ ಕಾಲ ನಾನು ಕ್ರಿಕೆಟ್ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನನ್ನ ಜೀವನ ಹೇಗೆ ಸಾಗುತ್ತಿದೆ.. ಮುಂದೆ ಯಾವ ದಿಕ್ಕಿನಲ್ಲಿ ಸಾಗಬಹುದು.. ಏಕೆ ಹೀಗಾದೆ ಹೀಗೆ ಕೆಟ್ಟ ಯೋಚನೆಗಳನ್ನೇ ನಾನು ಯೋಚಿಸುತ್ತಿದೆ. ಅದರಲ್ಲೂ ಕ್ರಿಕೆಟ್ ಪಂದ್ಯಗಳು ಇಲ್ಲದೆ ಇದ್ದಾಗ ತುಂಬಾನೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆದ್ರೆ ನಾನು ಪ್ರೀತಿಸಿದ್ದ ಆಟ ಕ್ರಿಕೆಟ್ ನನ್ನ ಬದುಕಿಗೆ ಮತ್ತೆ ಹೊಸ ತಿರುವನ್ನು ನೀಡಿತ್ತು. ಆ ದಿನಗಳಲ್ಲಿ ನಾನು ಹೇಗೆ ಬಚಾವ್ ಆಗಿಬಿಟ್ಟೆ ಎಂಬುದೇ ಗೊತ್ತಾಗುತ್ತಿಲ್ಲ ಅಂತಾರೆ ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ ಟೀಮ್ ಇಂಡಿಯಾ ಪರ 46 ಏಕದಿನ ಪಂದ್ಯಗಳನ್ನು ಹಾಗೂ 13 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ.








