“In the air… Sreesanth takes it. India win! ಅಂದು ವೀಕ್ಷಕ ವಿವರಣೆಕಾರರಾಗಿದ್ದ ರವಿಶಾಸ್ತ್ರಿ ಹೇಳಿರುವ ಈ ಪದಗಳನ್ನು ಕೇಳಿದಾಗ ಇಂದಿಗೂ ಮೈ ರೋಮಾಂಚನಗೊಳ್ಳುತ್ತೆ. ಹಾಗಂತ ಇಂದು ಮಾತ್ರವಲ್ಲ. ಎಂದೆಂದೂ ಭಾರತದ ಕೋಟ್ಯಂತರ ಅಭಿಮಾನಿಗಳನ್ನು ಪುಳಕಗೊಳ್ಳುವಂತೆ ಮಾಡುವ ಕಂಚಿನ ಕಂಠದ ಪದಗಳು.
ಹೌದು, 2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಆ ರೋಚಕ ಕ್ಷಣಗಳು ಒಂದು ಕ್ಷಣ ಕಣ್ಣ ಮುಂದೆಯೇ ಹಾದು ಹೋಗುತ್ತವೆ. 1983ರ ವಿಶ್ವಕಪ್ ನಂತರ ಭಾರತಕ್ಕೆ ಒಲಿದು ಬಂದ ಮೊದಲ ಐತಿಹಾಸಿಕ ಕ್ಷಣ.
ಅದ್ರಲ್ಲೂ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆದ್ದ ಸಂಭ್ರಮ. ಈ ಟ್ರೋಫಿ ಗೆಲ್ಲುವುದಕ್ಕಿಂತ ಮುನ್ನ ಅಂದ್ರೆ ಮೂರು ನಾಲ್ಕು ತಿಂಗಳುಗಳ ಹಿಂದೆಯಷ್ಟೇ ಭಾರತೀಯ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ವಿರುದ್ಧವೇ ತಿರುಗಿಬಿದ್ದಿದ್ದರು. ಕೆರೆಬಿಯನ್ ಏಕದಿನ ವಿಶ್ವಕಪ್‍ನ ಆಘಾತವನ್ನು ಇನ್ನೂ ಟೀಮ್ ಇಂಡಿಯಾ ಆಟಗಾರರು ಮರೆತಿರಲಿಲ್ಲ. ಆದ್ರೆ ಆ ಒಂದು ಗೆಲುವಿನ ನಂತರ ಇಡೀ ಟೀಮ್ ಇಂಡಿಯಾದ ಚಿತ್ರಣವೇ ಬದಲಾಗಿ ಹೋಯ್ತು. ಆನಂತರ ನಡೆದಿರುವುದೆಲ್ಲಾ ಧೋನಿ ಯುಗವೇ…
ಇದೀಗ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆಲುವಿನ ಕಟ್ಟಕಡೆಯ ಕ್ಷಣಗಳನ್ನು ಟೀಮ್ ಇಂಡಿಯಾದ ಆಟಗಾರ ರಾಬಿನ್ ಉತ್ತಪ್ಪ ನೆನಪಿಸಿಕೊಂಡಿದ್ದಾರೆ. ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ತಂಡದಲ್ಲಿ ರಾಬಿನ್ ಉತ್ತಪ್ಪ ಕೂಡ ತಂಡದಲ್ಲಿದ್ದರು. ಅಲ್ಲದೆ ಮಿಸ್ಬಾ ಕ್ಯಾಚ್ ಅನ್ನು ಪಡೆದ ಶ್ರೀಶಾಂತ್ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ಶ್ರೀಶಾಂತ್ ಕ್ಯಾಚ್ ಹಿಡಿಯುವ ಮುನ್ನ ಜಯ ಪಾಕಿಸ್ತಾನದ ಪರವೇ ಇತ್ತು. ಯಾಕಂದ್ರೆ ಪಾಕಿಸ್ತಾನಕ್ಕೆ ಬೇಕಾಗಿದ್ದದ್ದು ನಾಲ್ಕು ಎಸೆತಗಳಲ್ಲಿ ಆರು ರನ್. ಆದ್ರೆ ಕೈಯಲ್ಲಿ ಇದ್ದದ್ದು ಮಾತ್ರ ಒಂದು ವಿಕೆಟ್. ಆದ್ರೂ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‍ಗೆ ಅಂಟಿಕೊಂಡು ಬ್ಯಾಟ್ ಬೀಸುತ್ತಿದ್ದರು. ಅಲ್ಲದೆ ಭಾರತದ ಕೈಯಿಂದ ಜಯವನ್ನು ಕಿತ್ತುಕೊಳ್ಳಲು ಹಪಹಪಿಸುತ್ತಿದ್ದರು. ಆದ್ರೆ ಆ ಒಂದು ಹೊಡೆತ ಮಿಸ್ಬಾ ಅವರ ಲೆಕ್ಕಚಾರಗಳನ್ನು ಉಲ್ಟಾಪಲ್ಟಾ ಮಾಡಿಬಿಟ್ಟಿತ್ತು. ಅಂತಿಮವಾಗಿ ಭಾರತ ಐದು ರನ್‍ಗಳಿಂದ ಗೆದ್ದು ಬೀಗಿತ್ತು.
ಈ ಪಂದ್ಯದ ಕೊನೆಯ ಗಳಿಗೆಯಲ್ಲಿ ರಾಬಿನ್ ಉತ್ತಪ್ಪ ಅವರ ಮನಸ್ಸು ಯಾವ ಇತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಅಂತಿಮ ಎಸೆತದ ಮೊದಲ ಎಸೆತದಲ್ಲಿ ನಾನು ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದೆ. 15ನೇ ಓವರ್‍ನಿಂದ ಪ್ರತಿ ಕ್ಷಣವೂ ನಾನು ದೇವರಿಗೆ ಕೈ ಮುಗಿಯುತ್ತಿದೆ. ಗೆಲುವು ನಮ್ಮದಾಗಿ ಅಂತ ಬೇಡಿಕೊಳ್ಳುತ್ತಿದೆ. ಆದ್ರೆ ಜೋಗಿಂದರ್ ಶರ್ಮಾ ಅವರ ಮೊದಲ ಎಸೆತವೇ ವೈಡ್ ಆಗಿತ್ತು. ಓಕೆ, ಸಿಕ್ಸ್ ಹೋಗದೇ ಇದ್ರೆ ಸಾಕು ಅಂತ ಅಂದುಕೊಂಡಿದ್ದೆ.
ಆದ್ರೆ ಮರು ಎಸೆತದಲ್ಲೇ ಮಿಸ್ಬಾ ಸಿಕ್ಸರ್ ಬಾರಿಸಿದ್ದರು. ಆದ್ರೂ ಎದೆಗುಂದಿರಲಿಲ್ಲ. ಇನ್ನೂ ಅವಕಾಶ ನಮಗಿದೆ. ಕಮಾನ್ ಅಂತ ಹೇಳುತ್ತಿದ್ದೆ. ಆದ್ರೆ ಆ ಒಂದು ಎಸೆತವನ್ನು ಮಿಸ್ಬಾ ಸ್ಕೂಪ್ ಶಾಟ್ ಆಗಿ ಪರಿವರ್ತಿಸಿದ್ರು. ಚೆಂಡು ಗಾಳಿಯಲ್ಲಿ ತೇಲಾಡಿಕೊಂಡು ಶಾರ್ಟ್ ಲೆಗ್‍ನತ್ತ ಕೆಳಗಡೆ ಬರುತ್ತಿತ್ತು. ಆಗ ಶಾರ್ಟ್ ಲೆಗ್ ನಲ್ಲಿ ಫೀಲ್ಡರ್ ಯಾರು ಎಂಬುದನ್ನು ನೋಡುತ್ತಿದ್ದೆ. ಆಗ ನನಗೆ ಶ್ರೀಶಾಂತ್ ಕಂಡ. ಆಗ ಒಂದು ಕ್ಷಣ ಆತಂತಕವಾಯ್ತು.
ಯಾಕಂದ್ರೆ ಶ್ರೀಶಾಂತ್ ಕ್ಯಾಚ್‍ಗಳನ್ನು ಕೈಚೆಲ್ಲುತ್ತಿದ್ದ ವಿಚಾರಗಳು ತಂಡದಲ್ಲಿರುವ ಎಲ್ಲಾ ಆಟಗಾರರಿಗೂ ಗೊತ್ತಿತ್ತು. ಅದ್ರಲ್ಲೂ ಸುಲಭ ಕ್ಯಾಚ್‍ಗಳನ್ನು ಕೈಚೆಲ್ಲಿರುವುದನ್ನು ಎಲ್ಲರೂ ನೋಡಿದ್ದಾರೆ. ಶ್ರೀಶಾಂತ್ ಕ್ಯಾಚ್ ಹಿಡಿಯುತ್ತಾನೋ ಇಲ್ವೋ ಅಂತ ನೋಡುತ್ತಲೇ ನಾನು ವಿಕೆಟ್‍ನತ್ತ ಓಡೋಡಿ ಬರುತ್ತಿದೆ. ಆಗಲೂ ದೇವರಿಗೆ ಕೈ ಮುಗಿಯುತ್ತಿದೆ. ಶ್ರೀಶಾಂತ್ ಕ್ಯಾಚ್ ಹಿಡಿಯಲಿ ಅಂತ. ಕೊನೆಗೂ ಶ್ರೀಶಾಂತ್ ಕ್ಯಾಚ್ ಹಿಡಿದ. ಆದ್ರೆ ಚೆಂಡು ತನ್ನ ಕೈಯ ಬೊಗಸೆಯಲ್ಲಿ ಬಿದ್ದಾಗ ಶ್ರೀಶಾಂತ್ ಅದನ್ನೇ ನೋಡುತ್ತಿದ್ದ ಅಂತ ನಗುತ್ತಲೇ ರಾಬಿನ್ ಉತ್ತಪ್ಪ ಆ ದಿನದ ಆ ರೋಚಕ ಕ್ಷಣವನ್ನು ನೆನಪಿಸಿಕೊಂಡರು