ಕೋವಿಡ್ -19 ವೈರಸ್ ಕೊಲ್ಲಲು ರೋಬಾಟ್
ವಾಷಿಂಗ್ಟನ್, ಜುಲೈ 8: ಮಾನವಕುಲವನ್ನು ಬಾಧಿಸುತ್ತಿರುವ, ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕ ರೋಗ ಕೊರೊನಾ ಎಂಬ ಮಹಾಮಾರಿಗೆ ಲಸಿಕೆಯನ್ನು ಕಂಡು ಹಿಡಿಯುವಲ್ಲಿ ರಾಷ್ಟ್ರಗಳು ಕಾರ್ಯನಿರತವಾಗಿದೆ. ಆದರೆ ಸದ್ಯಕ್ಕೆ ಲಸಿಕೆ ಬಿಡುಗಡೆಯಾಗುವುದು ದೂರದ ಮಾತು.
ಈ ನಡುವೆ ತಂತ್ರಜ್ಞಾನದ ಸಹಾಯದಿಂದ ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವಿ -2 ವೈರಸ್ ಅನ್ನು ನಾಶಮಾಡುವ ಉಪಕರಣವನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಅಮೆಜಾನ್ ಕಂಪನಿ ಬಿಡುಗಡೆ ಮಾಡಿರುವ ಅಮೆಜಾನ್ ರೋಬಾಟ್.

ಕೊರೊನಾ ವೈರಸ್ ಅನ್ನು ನೇರಳಾತೀತ (ಅಲ್ಟಾ ವೈಲೆಟ್) ಬೆಳಕಿನಿಂದ ಕೊಲ್ಲಲು ವಿನ್ಯಾಸಗೊಳಿಸಲಾದ ರೋಬೋಟ್ ಅನ್ನು ಅಮೆಜಾನ್ ನಿರ್ಮಿಸಿದೆ. ಈಗಾಗಲೇ ಕಾರ್ಪೊರೇಟ್ ಕಚೇರಿಗಳಲ್ಲಿ , ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲಿ ರೋಬೋಟ್ ಬಳಕೆ ಪ್ರಾರಂಭವಾಗಿದೆ.
ಲಗೇಜ್ ಸೂಟ್ ಕೇಸ್ ಗೆ ಚಕ್ರಗಳನ್ನು ಜೋಡಿಸಿರುವಂತೆ ಕಾಣುವ ಈ ಯಂತ್ರಕ್ಕೆ ಸುಮಾರು 10 ನೇರಳಾತೀತ ಟ್ಯೂಬ್ಲೈಟ್ಗಳನ್ನು ಅಳವಡಿಸಲಾಗಿದೆ. ಇದು ಜನರು ಆಗಾಗ್ಗೆ ಸ್ಪರ್ಶಿಸುವ ಹಜಾರಗಳು ಮತ್ತು ಇತರ ಸ್ಥಳಗಳನ್ನು , ಸೋಂಕುರಹಿತಗೊಳಿಸುತ್ತದೆ.
ಇಂತಹ ನೂರಾರು ರೋಬೋಟ್ ಗಳನ್ನು ತಯಾರಿಸಿರುವ ಅಮೆಜಾನ್ ಕಂಪನಿಯು ಈ ಯಂತ್ರಗಳು ದಿನಕ್ಕೆ 8000 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಹೇಳಿಕೊಂಡಿದೆ.








