ಭಾರತೀಯ ಚಿತ್ರರಂಗವೇ ಕಾದು ಕುಳಿತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ (Toxic) ಚಿತ್ರದ ಟೀಸರ್ ಅಂತಿಮವಾಗಿ ಬಿಡುಗಡೆಯಾಗಿದೆ. ಕೆಜಿಎಫ್ ನಂತರ ಯಶ್ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಈ ಟೀಸರ್ ಉತ್ತರ ನೀಡಿದ್ದು ಮಾತ್ರವಲ್ಲದೆ, ನಿರೀಕ್ಷೆಗೂ ಮೀರಿದ ದೃಶ್ಯ ವೈಭವವನ್ನು ಕಟ್ಟಿಕೊಟ್ಟಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಯಶ್ ಅವರ ಅಬ್ಬರ ಹೇಗಿರಲಿದೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ.
ಐದು ಭಾಷೆಗಳಲ್ಲಿ ಏಕಕಾಲಕ್ಕೆ ಟಾಕ್ಸಿಕ್ ಆರ್ಭಟ
ಟಾಕ್ಸಿಕ್ ಚಿತ್ರದ ಟೀಸರ್ ಕೇವಲ ಒಂದು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಚಿತ್ರತಂಡ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ಬರೀ ಒಂದೆರಡಲ್ಲ, ಬರೋಬ್ಬರಿ 5 ಭಾಷೆಗಳಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾದ ಖದರ್ ಏನೆಂಬುದನ್ನು ತೋರಿಸಿಕೊಟ್ಟಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಟೀಸರ್ ರಿಲೀಸ್ ಆಗಿದ್ದು, ಎಲ್ಲಾ ಭಾಷೆಯ ಪ್ರೇಕ್ಷಕರಿಂದಲೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಯೊಂದು ಭಾಷೆಯಲ್ಲೂ ಯಶ್ ಅವರ ಧ್ವನಿ ಮತ್ತು ಡೈಲಾಗ್ ಡೆಲಿವರಿ ರೋಮಾಂಚನಕಾರಿಯಾಗಿದೆ.
ರಕ್ತಸಿಕ್ತ ಕಥೆಯಲ್ಲಿ ರಾಯ ಮತ್ತು ಮಗನ ಅಟ್ಟಹಾಸ
ಟೀಸರ್ ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ರಕ್ತಸಿಕ್ತ ಹಿನ್ನೆಲೆ. ಇದೊಂದು ಭೂಗತ ಲೋಕದ ಡಾನ್ ಕಥೆ ಎನ್ನುವ ಭಾವನೆಯನ್ನು ಟೀಸರ್ ಮೂಡಿಸುತ್ತದೆ. ರಾಯ ಮತ್ತು ರಾಯನ ಮಗನ ಅಟ್ಟಹಾಸದ ಕಥನ ಇಲ್ಲಿ ಎದ್ದು ಕಾಣುತ್ತಿದೆ. ದೃಶ್ಯಗಳಲ್ಲಿ ಕಾಣುವ ಹಿಂಸೆ, ಗನ್ ಪೌಡರ್ ಮತ್ತು ಯಶ್ ಅವರ ಇಂಟೆನ್ಸ್ ಲುಕ್ ಸಿನಿಮಾದ ಸ್ಕೇಲ್ ಎಷ್ಟು ದೊಡ್ಡದಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ.
ಡಬಲ್ ರೋಲ್ ಗುಟ್ಟು ರಟ್ಟು ಮಾಡಿದ ಡೈಲಾಗ್
ಟಾಕ್ಸಿಕ್ ಸಿನಿಮಾದ ಹಿಂದಿನ ಟೈಟಲ್ ಟೀಸರ್ ನಲ್ಲಿ ಡ್ಯಾಡಿ ಈಸ್ ಹೋಮ್ (Daddy is Home) ಎನ್ನುವ ಡೈಲಾಗ್ ಫೇಮಸ್ ಆಗಿತ್ತು. ಆದರೆ, ಈಗ ಬಿಡುಗಡೆಯಾಗಿರುವ ಈ ಎರಡನೇ ಟೀಸರ್ ನಲ್ಲಿ ಡ್ಯಾಡಿ ಆಯಮ್ ಹೋಮ್ (Daddy I am Home) ಎನ್ನುವ ಬದಲಾದ ಡೈಲಾಗ್ ಕೇಳಿಬಂದಿದೆ. ಈ ಸಣ್ಣ ಬದಲಾವಣೆ ಚಿತ್ರದ ಕಥೆಯ ಬಗ್ಗೆ ದೊಡ್ಡ ಸುಳಿವು ನೀಡಿದೆ.
ಈ ಡೈಲಾಗ್ ಹೇಳುವಾಗ ಯಶ್ ಅವರ ಲುಕ್ ಮತ್ತು ಮ್ಯಾನರಿಸಂನಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಹೀಗಾಗಿ ಯಶ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಅಂದರೆ ತಂದೆ ಮತ್ತು ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.
ಅಪ್ಪ ಮತ್ತು ಮಗ ಇಬ್ಬರೂ ಸ್ಟ್ರಾಂಗ್
ಟೀಸರ್ ನಲ್ಲಿ ಮೊದಲು ಕಾಣಿಸಿಕೊಳ್ಳುವ ಯಶ್ ಲಾಂಗ್ ಹೇರ್ ಲುಕ್ ಹೊಂದಿದ್ದು, ಇದು ರಾಯನ ಪಾತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ನಾನು ಮುಗಿತು ಅನ್ನೋವರೆಗೂ ಇದು ಮುಗಿಯೋದಿಲ್ಲ ಎನ್ನುವ ಖಡಕ್ ಡೈಲಾಗ್ ಈ ಪಾತ್ರದ ತೂಕವನ್ನು ಹೆಚ್ಚಿಸಿದೆ. ಈ ಮಾತು ಯಾರಿಗೆ ಮತ್ತು ಯಾಕೆ ಹೇಳಿದರು ಎಂಬುದು ಸದ್ಯದ ಕುತೂಹಲ.
ಮತ್ತೊಂದೆಡೆ ಡ್ಯಾಡಿ ಆಯಮ್ ಹೋಮ್ ಎನ್ನುವ ಡೈಲಾಗ್ ಮೂಲಕ ಎಂಟ್ರಿ ಕೊಡುವ ಇನ್ನೊಂದು ಪಾತ್ರ ಮಗನದ್ದಿರಬಹುದು ಎಂದು ಊಹಿಸಲಾಗಿದೆ. ಅಪ್ಪನ ಅಬ್ಬರ ಒಂದೆಡೆಯಾದರೆ, ಮಗನ ಆರ್ಭಟ ಇನ್ನೊಂದು ಹಂತದಲ್ಲಿದೆ. ಒಟ್ಟಾರೆಯಾಗಿ ಅಪ್ಪ ಮತ್ತು ಮಗ ಇಬ್ಬರೂ ಪರದೆ ಮೇಲೆ ಬೆಂಕಿ ಹಚ್ಚುವುದು ಖಂಡಿತ ಎನ್ನುವ ಭರವಸೆಯನ್ನು ಟೀಸರ್ ನೀಡಿದೆ.
ಒಟ್ಟಾರೆ ಹೇಳುವುದಾದರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಅಬ್ಬರ ಕೇವಲ ಸ್ಯಾಂಡಲ್ ವುಡ್ ಗೆ ಸೀಮಿತವಾಗಿಲ್ಲ. ಇದೊಂದು ಪಕ್ಕಾ ಆಕ್ಷನ್ ಎಂಟರ್ಟೈನರ್ ಆಗಿದ್ದು, ಚಿತ್ರದ ತುಂಬೆಲ್ಲಾ ರಕ್ತದೋಕುಳಿ ಹರಿಯಲಿದೆ ಎಂಬುದನ್ನು ಈ ಝಲಕ್ ಟೀಸರ್ ಸಾಬೀತುಪಡಿಸಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟುವಲ್ಲಿ ಟೀಸರ್ ಯಶಸ್ವಿಯಾಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾತರ ಹೆಚ್ಚಿದೆ.








