ಕೆಜಿಎಫ್ ಚಾಪ್ಟರ್ 2, ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಈ ಚಿತ್ರಕ್ಕಾಗಿ ದೇಶಾದ್ಯಂತ ಸಿನಿರಸಿಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದೀಗ ಈ ಸಿನಿಮಾ ಯಾವಾಗ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಇದೇ ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 23ರಂದು ರಾಖಿಭಾಯ್ ಎಂಟ್ರಿಕೊಡಲಿದ್ದಾನಂತೆ. ಆದ್ರೆ ಈ ಬಗ್ಗೆ ಚಿತ್ರತಂಡದಿಂದ ಮಾತ್ರ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನು ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಹೈದರಾಬಾದ್ ನಲ್ಲಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸುತ್ತಿದೆ. ಸಿನಿಮಾ ಬಗ್ಗೆ ಒಂದಲ್ಲಾ ಒಂದು ಮಾಹಿತಿ ನೀಡುತ್ತಿದ್ದ ಪ್ರಶಾಂತ್ ನೀಲ್ ಅವರೂ ಸಹ ರಿಲೀಸ್ ಡೇಟ್ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದ್ರೆ ಕೆಜಿಎಫ್ ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂನ ಕಾರ್ತಿಕ್ ಗೌಡ ಅವರು, ಈ ತಿಂಗಳ ಕೊನೆಯಲ್ಲಿ ನಿಮಗೆ ಚಿತ್ರದ ಬಗ್ಗೆ ಅಪ್ಡೇಪ್ ಸಿಗಲಿದೆ ಎಂದಿದ್ದಾರೆ.
ಒಟ್ಟಾರೆ ಚಿತ್ರದ ರಿಲೀಸ್ ಬಗ್ಗೆ ಚಿತ್ರತಂಡ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲವಾದರೂ, ಇನ್ನೇನು ಚಿತ್ರ ಮುಗಿಯೋ ಹಂತದಲ್ಲಿರೋದ್ರಿಂದ ದಸರಾ ಟೈಂಗೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ.








