2021ರ ಆಸ್ಟ್ರೇಲಿಯನ್ ಟೂರ್ನಿಗೆ ಟೆನಿಸ್ ಮಾಸ್ಟರ್ ಫೆಡರರ್ ಅಲಭ್ಯ…!
ವಿಶ್ವ ಟೆನಿಸ್ ಮಾಸ್ಟರ್ ರೋಜರ್ ಫೆಡರರ್ ಅವರು ಪ್ರತಿಷ್ಠಿತ 2021ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಮೊಣಕಾಲು ನೋವಿಗೆ ಎರಡು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಈಗ ಚೇತರಿಸಿಕೊಂಡಿರುವ ಫೆಡರರ್ ಫೆಬ್ರವರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ರೋಜರ್ ಫೆಡರರ್ ಅವರ ಮ್ಯಾನೇಜರ್ ಹೇಳಿದ್ದಾರೆ.
2020ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಂತರ ಫೆಡರರ್ ಅವರು ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು. ಕೋವಿಡ್ ಆತಂಕದ ನಡುವೆ ನಡೆದಿದ್ದ ಯುಎಸ್ ಓಪನ್ ಮತ್ತು ಫ್ರೆಂಚ್ ಓಪನ್ ಟೂರ್ನಿಯಲ್ಲೂ ಆಡಿರಲಿಲ್ಲ.
ಇದೇ ವೇಳೆ ಫೆಡರರ್ ಅವರು ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.
39ರ ಹರೆಯದ ಫೆಡರರ್ ಅವರು 1999ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಆಡಿದ್ದರು. ಆದ್ರೆ ಆಗ ಅರ್ಹತಾ ಸುತ್ತಿನಲ್ಲೇ ಹೊರನಡೆದಿದ್ದರು.
ನಂತರ 2004ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಬಳಿಕ 2006, 2007, 2010, 2017 ಮತ್ತು 2018 ಸೇರಿದಂತೆ ಒಟ್ಟು ಆರು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಒಟ್ಟು 15 ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರು. 2020ರ ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು.
ಒಟ್ಟು ರೋಜರ್ ಫೆಡರರ್ ಅವರು 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಆರು ಆಸ್ಟ್ರೇಲಿಯನ್ ಓಪನ್, ಒಂದು ಫ್ರೆಂಚ್ ಓಪನ್, ಎಂಟು ಬಾರಿ ವಿಂಬಲ್ಡನ್ ಹಾಗೂ ಐದು ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸದ್ಯ ಅತೀ ಹೆಚ್ಚು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಪಡೆದ ದಾಖಲೆ ಫೆಡರರ್ ಹೆಸರಿನಲ್ಲಿದೆ.
ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿ ಮೂರು ವಾರ ತಡವಾಗಿ ಆರಂಭವಾಗುತ್ತಿದೆ. ಫೆಬ್ರವರಿ 8ರಿಂದ ಆರಂಭವಾಗಲಿದೆ. ಕೋವಿಡ್ ಮಾರ್ಗಸೂಚಿಗಳು ಕಟ್ಟು ನಿಟ್ಟಾಗಿ ಇರುವುದರಿಂದ ಪ್ರತಷ್ಠಿತ ಟೂರ್ನಿ ನಡೆಯಲು ವಿಳಂಬವಾಗಿದೆ.
ನೆಚ್ಚಿನ ಟೂರ್ನಿಯಲ್ಲಿ ಮುಂದಿನ ಅಂದ್ರೆ 2022ರಲ್ಲಿ ಆಡುವ ಇರಾದೆಯನ್ನು ಫೆಡರರ್ ಹೊಂದಿದ್ದಾರೆ ಎಂದು ಅವರ ಮ್ಯಾನೇಜರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.