ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾದಲ್ಲಿ ನಂಟು ಹೊಂದಿರುವ ಆರೋಪದ ಮೇರೆಗೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಗಿಣಿ ಯಾವುದೇ ತಪ್ಪು ಮಾಡಿಲ್ಲ, ನನ್ನ ಮಗಳು ಅಮಾಯಕಳು ಎಂದು ನಟಿ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.
ಮಗಳು ರಾಗಿಣಿಯನ್ನು ಭೇಟಿ ಮಾಡಲು ಬೆಳಿಗ್ಗೆಯಿಂದ ಸಿಸಿಬಿ ಕಚೇರಿ ಬಳಿ ಕಾಯುತ್ತಿದ್ದ ತಾಯಿ ರೋಹಿಣಿ ದ್ವಿವೇದಿ, ಮಗಳು ಬಾರದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ ತೆರಳಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಗಿಣಿಯನ್ನು ಡ್ರಗ್ಸ್ ಕೇಸಲ್ಲಿ ಸಿಲುಕಿಸಲು ಯತ್ನ ನಡೆಯುತ್ತಿದೆ. ಆದರೆ, ನನ್ನ ಮಗಳು ಎಲ್ಲಾ ಆರೋಪಗಳಿಂದ ಮುಕ್ತಳಾಗಿ ಬರುತ್ತಾಳೆ ಎಂದು ಹೇಳಿದ್ದಾರೆ.
ಮುಂದಿನ ದಿಗಳಲ್ಲಿ ಸತ್ಯಾಂಶ ಏನೆಂದು ಹೇಳುತ್ತೇವೆ. ರಾಗಿಣಿ ಹೊರಬಂದ ನಂತರ ಆಕೆ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂಬುದರ ಬಗ್ಗೆ ದಾಖಲೆಗಳನ್ನು ನಾವೇ ನೀಡುತ್ತೇವೆ. ಸತ್ಯಾಂಶದ ಕುರಿತು ದಾಖಲೆಗಳನ್ನು ನಾವೇ ಮಾಧ್ಯಮಗಳ ಮುಂದೆ ಮುಂದಿಟ್ಟು ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.