ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಗುರು -ಶಿಷ್ಯ ..!
ರಾಹುಲ್ ದ್ರಾವಿಡ್..ಟೀಮ್ ಇಂಡಿಯಾದ ಹೆಡ್ ಕೋಚ್. ರೋಹಿತ್ ಶರ್ಮಾ … ಟೀಮ್ ಇಂಡಿಯಾ ಟಿ-20 ತಂಡದ ಕ್ಯಾಪ್ಟನ್.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿ ಇಬ್ಬರಿಗೂ ಮೊದಲ ಟೆಸ್ಟ್. ಪರಿಪೂರ್ಣ ನಾಯಕನಾಗಿ ರೋಹಿತ್ ಗೆ ಇದು ಮೊದಲ ಸರಣಿ. ಹಾಗೇ ಹೆಡ್ ಕೋಚ್ ಆಗಿ ದ್ರಾವಿಡ್ ಮೊದಲ ಅಗ್ನಿ ಪರೀಕ್ಷೆ.
ಅಂದ ಹಾಗೇ ರೋಹಿತ್ ಶರ್ಮಾ ತನ್ನ ಚೊಚ್ಚಲ ಏಕದಿನ ಪಂದ್ಯವನ್ನು ರಾಹುಲ್ ದ್ರಾವಿಡ್ ನಾಯಕತ್ವದಲ್ಲೇ ಆಡಿದ್ದು. ಇದೀಗ ನಾಯಕನಾಗಿ ರೋಹಿತ್ ಶರ್ಮಾ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ- ಪಂದ್ಯಕ್ಕು ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಜೊತೆಗಿನ 14 ವರ್ಷಗಳ ಹಿಂದಿನ ದಿನಗಳನ್ನು ರಾಹುಲ್ ದ್ರಾವಿಡ್ ನೆನಪಿಸಿಕೊಂಡ್ರು.
2007ರಲ್ಲಿ ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಆಗ ನಾನು ನಾಯಕನಾಗಿದ್ದೆ. ರೋಹಿತ್ ಶರ್ಮಾ ಅವರ ಪ್ರತಿಭೆ ಏನು ಅಂತ ಗೊತ್ತಿತ್ತು . ರೋಹಿತ್ ಒಬ್ಬ ಅದ್ಭುತ ಪ್ರತಿಭಾವಂತ. ಕಳೆದ 14 ವರ್ಷಗಳಲ್ಲಿ ರೋಹಿತ್ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಒಬ್ಬ ನಾಯಕನಾಗಿಯೂ ಪ್ರಬುದ್ಧತೆಯನ್ನು ಸಾಧಿಸಿಕೊಂಡಿದ್ದಾರೆ. ಇದೀಗ ಮತ್ತೆ ಜೊತೆಯಾಗಿರೋದು ತುಂಬಾನೇ ಸಂತಸವನ್ನುಂಟು ಮಾಡಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಅದೇ ರೀತಿ ರೋಹಿತ್ ಶರ್ಮಾ ಕೂಡ ದ್ರಾವಿಡ್ ಅವರ ಜೊತೆ ಕಳೆದ ದಿನಗಳನ್ನು ಸ್ಮರಿಸಿಕೊಂಡ್ರು.
2007ರಲ್ಲಿ ನಾನು ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದೆ. ಆದ್ರೆ ಬೆಂಗಳೂರಿನ ಶಿಬಿರದಲ್ಲಿ ನಾನು ಮೊದಲ ಬಾರಿ ರಾಹುಲ್ ದ್ರಾವಿಡ್ ಜೊತೆ ಮಾತನಾಡಿದ್ದೆ. ಅದು ಕೂಡ ಜಾಸ್ತಿ ಹೊತ್ತು ಮಾತನಾಡಿಲ್ಲ. ನಾನು ಸ್ವಲ್ಪ ಒತ್ತಡಕ್ಕೆ ಸಿಲುಕಿದ್ದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೀನು ಆಡುತ್ತಿಯಾ ಅಂದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.