ಅದು 2013ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇಡೀ ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ಪರವಶ ಮಾಡಿಕೊಂಡಿದ್ದರು. ಮನಮೋಹಕ 209 ರನ್ ಸಿಡಿಸಿದ್ದ ರೋಹಿತ್ ತಮ್ಮ ಮೊದಲ ಏಕದಿನ ದ್ವಿಶತಕ ದಾಖಲಿಸಿದ್ದ ಹಿರಿಮೆಗೂ ಪಾತ್ರರಾಗಿದ್ದರು.
ಇದೀಗ ಕರೋನಾ ಟೈಮ್ ನಲ್ಲಿ ರೋಹಿತ್ ಶರ್ಮಾ ಆ ಪಂದ್ಯದ ರೋಚಕ ಕ್ಷಣಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ತನ್ನ ಒಡನಾಡಿ ಆರ್. ಅಶ್ವಿನ್ ಜೊತೆ ಇನ್‍ಸ್ಟಾಗ್ರಾಂನಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿರುವ ರೋಹಿತ್ ಕೆಲವೊಂದು ಸ್ವಾರಸ್ಯಕರ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಆ ದ್ವಿಶತಕ ದಾಖಲಿಸಲು ಧೋನಿಗೆ ಹೇಗೆ ಕಾರಣರಾದ್ರು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ.
ನಾನು ಏಕದಿನ ಪಂದ್ಯದಲ್ಲಿ ದ್ವಿಶತಕ ದಾಖಲಿಸುತ್ತೇನೆ ಅಂತ ಎಂದೂ ಅಂದುಕೊಂಡಿರಲಿಲ್ಲ. ನಾನು ಚೆನ್ನಾಗಿ ಆಡಬೇಕು ಅಂದುಕೊಂಡಿದ್ದೆ. ಆ ಪಂದ್ಯದಲ್ಲಿ ಶಿಖರ್ ಧವನ್ ಸ್ವಲ್ಪ ಮಟ್ಟಿನ ಸಾಥ್ ಕೊಟ್ಟ. ಆ ನಂತರ ವಿರಾಟ್ ರನೌಟ್ ಆದ. ಬಳಿಕ ನಾನು ಮತ್ತು ಸುರೇಶ್ ರೈನಾ ಜವಾಬ್ದಾರಿಯುತವಾಗಿ ಆಡ್ಕೊಂಡು ಉತ್ತಮ ಜೊತೆಯಾಟವನ್ನು ಆಡಿದ್ದೇವು. ನಂತರ ಯುವಿ ಕೂಡ ಔಟಾಗಿಬಿಟ್ಟರು. ಆದಾದ ನಂತರ ನಾನು ಮತ್ತು ಧೋನಿ 62 ರನ್‍ಗಳ ಜೊತೆಯಾಟವನ್ನು ಆಡಿದ್ದೇವು. ಆದ್ರೆ ಈ ಜೊತೆಯಾಟವೇ ನನ್ನನ್ನು ದ್ವಿಶತಕ ದಾಖಲಿಸುವಂತೆ ಪ್ರೇರಪಿಸಿತ್ತು ಅಂತ ರೋಹಿತ್ ಹೇಳಿದ್ದಾರೆ.
ಟೀಮ್ ಇಂಡಿಯಾ ನಾಯಕ ಧೋನಿ ಪ್ರತಿ ಕ್ಷಣದಲ್ಲೂ ಪ್ರೇರಣೆ ನೀಡುತ್ತಿದ್ದರು. ನಾವಿಬ್ಬರು ಹಾಗೇ ಸುಮ್ಮನೆ ಮಾತನಾಡಿಕೊಳ್ಳುತ್ತಿದ್ದೇವು. ನಾನು ಮತ್ತು ಧೋನಿ 48 ಓವರ್ ತನಕ ಆಡುತ್ತಿದ್ದೇವು. ಆಗ ಧೋನಿ ಮತ್ತು ನಾನು ಚರ್ಚೆ ಮಾಡಿಕೊಳ್ಳುತ್ತಿದ್ದೇವು. ಆಗ ಧೋನಿ ನೀನು ಸೆಟ್ ಬ್ಯಾಟ್ಸ್ ಮೆನ್ ಆಗಿದ್ದಿಯಾ. ಅಲ್ಲದೆ ನಾವು 50 ಓವರ್‍ಗಳ ತನಕ ಆಡಬೇಕು ಎಂದು ಹೇಳುತ್ತಿದ್ದರು. ಧೋನಿಯ ಸ್ಪೂರ್ತಿಯುತ ಮಾತಿನಿಂದಲೇ ನನಗೆ ಈ ಸಾಧನೆಯನ್ನು ಮಾಡಲು ಸಾಧ್ಯವಾಯ್ತು ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೇವಲ 159 ಎಸೆತಗಳಲ್ಲಿ ಆಕರ್ಷಕ 209 ರನ್ ಸಿಡಿಸಿದ್ದರು. ಅಲ್ಲದೆ ಈ ಪಂದ್ಯವನ್ನು ಭಾರತ 57 ರನ್‍ಗಳಿಂದ ಗೆದ್ದು ಬೀಗಿತ್ತು. ಹಾಗೇ ಏಕದಿನ ಕ್ರಿಕೆಟ್ ನಲ್ಲಿ ಸಚಿನ್, ಸೆಹ್ವಾಗ್ ನಂತರ ದ್ವಿಶತಕ ದಾಖಲಿಸಿದ್ದ ಮೂರನೇ ಆಟಗಾರನಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ.








