ಫೀಲ್ಡಿಂಗ್ ಮಾಡುತ್ತಿರುವಾಗ ಧವನ್ “ಕಠ ಸಿರಿ”ಗೆ ಬಾಂಗ್ಲಾ ಬ್ಯಾಟ್ಸ್ ಮೆನ್ ಗಲಿಬಿಲಿ…!
ಈ ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಮಾಡುತ್ತಿರುವ ಕಿತಾಪತಿ ಒಂದೆರಡಲ್ಲ. ಸಾಮಾನ್ಯವಾಗಿ ಮೈದಾನದಲ್ಲಿ ಆಡುತ್ತಿರುವಾಗ ನಮಗೆ ಅವರ ಹುಡುಗಾಟ, ಚೆಲ್ಲಾಟದ ಮಾತುಗಳು ಕೇಳಿಸುವುದಿಲ್ಲ. ನೋಡಲು ಕೂಡ ಆಗುವುದಿಲ್ಲ. ಕೆಲವೊಂದು ಬಾರಿ ಎದುರಾಳಿ ಆಟಗಾರರ ಜೊತೆ ಮಾತಿನ ಸಮರ ನಡೆಸುವುದನ್ನು ನಾವು ನೋಡಿದ್ದೇವೆ. ಆದ್ರೆ ಆಟಗಾರರ ಇನ್ನುಳಿದ ಚೇಷ್ಟೆಗಳನ್ನು ನೋಡಲು ಆಗಲ್ಲ. ಇದೀಗ ಲಾಕ್ ಡೌನ್ ಟೈಮ್ ನಲ್ಲಿ ಕ್ರಿಕೆಟ್ ಆಟಗಾರರು ಮೈದಾನದಲ್ಲಿ ನಡೆದಂತಹ ಕೆಲವೊಂದು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಹಾಗೇ ತಮ್ಮ ಅಭಿಮಾನಿಗಳ ಜೊತೆಗೂ ಶೇರ್ ಮಾಡಿಕೊಂಡಿದ್ದಾರೆ.
ಮಯಾಂಕ್ ಅಗರ್‍ವಾಲ್ ಅವರ ಇನ್‍ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ
ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಧವನ್ ಬಳಿ ಹಾಡು ಹಾಡುವಂತೆ ಅಗರ್‍ವಾಲ್ ಕೇಳಿಕೊಂಡಿದ್ದರು. ಇದಕ್ಕೆ ಧವನ್ ನಾನು ಚೆನ್ನಾಗಿ ಹಾಡಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂಜಾಬಿ ಹಾಡುಗಳನ್ನು ಚೆನ್ನಾಗಿ ಹಾಡುತ್ತಾರೆ ಅಂತ ಹೇಳಿದ್ರು.
ಹಾಗಂತ ಧವನ್, ಅಗರ್‍ವಾಲ್ ಕೋರಿಕೆಯನ್ನು ನಿರಾಕರಿಸಲಿಲ್ಲ. ಧವನ್ ಪಂಜಾಬಿ ಹಾಡಿನ ಒಂದೆರೆಡು ಸಾಲು ಹಾಡಿದ್ದರು. ಆಗ ಮೂವರು ಬ್ಯಾಟ್ಸ್‍ಮೆನ್‍ಗಳು ಮನಬಂದಂತೆ ನಕ್ಕಿದ್ದಾರೆ. ತಕ್ಷಣವೇ ಧವನ್ ಹಾಡುವುದನ್ನು ನಿಲ್ಲಿಸಿದ್ದರು. ಆಗ ರೋಹಿತ್ ಶರ್ಮಾಗೆ ಆ ಒಂದು ಘಟನೆ ನೆನಪಾಗಿಬಿಟ್ಟಿತ್ತು. ಅದನ್ನು ರೋಹಿತ್ ಹೇಳುವುದು ಹೀಗೆ…
ಅದು 2015ರಲ್ಲಿ. ನಾವು ಬಾಂಗ್ಲಾ ದೇಶದ ವಿರುದ್ಧ ಆಡುತ್ತಿದ್ದೇವು. ಪಂದ್ಯದಲ್ಲಿ ನಾವು ಫೀಲ್ಡಿಂಗ್ ಮಾಡುತ್ತಿದ್ದೇವು. ನಾನು ಫಸ್ಟ್ ಸ್ಲಿಪ್‍ನಲ್ಲಿದ್ದೆ. ಶಿಖರ್ ಧವನ್ ಮೂರನೇ ಸ್ಲಿಪ್ ನಲ್ಲಿದ್ದರು. ಬೌಲಿಂಗ್ ಮಾಡುತ್ತಾ, ಬೌಲರ್ ಓಡಲು ಶುರು ಮಾಡಿದ್ದರು. ಬ್ಯಾಟ್ಸ್ ಮೆನ್ ಕೂಡ ಬ್ಯಾಟ್ ಮಾಡಲು ರೆಡಿಯಾಗಿ ನಿಂತಿದ್ದರು. ಸಡನ್ ಆಗಿ ಶಿಖರ್ ಧವನ್ ಜೋರಾಗಿ ಹಾಡಲು ಶುರು ಮಾಡಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ತಮೀಮ್ ಇಕ್ಬಾಲ್ ಗಲಿಬಿಲಿಗೊಂಡಿದ್ದರು. ಇದೆಲ್ಲಿಂದ ಸ್ವರ ಕೇಳಿಬರುತ್ತಿದೆ ಅಂತ ಅಚ್ಚರಿಗೊಂಡಿದ್ದರು. ಅಲ್ಲದೆ ಆ ಸ್ವರ ಎಲ್ಲಿಂದ ಬಂತು ಅನ್ನೋದೇ ಗೊತ್ತಾಗಲಿಲ್ಲ ಅವರಿಗೆ. ಈಗ ಅದನ್ನು ನೆನಪಿಸಿಕೊಂಡ್ರೆ ಅಷ್ಟೊಂದು ತಮಾಷೆ ಅನ್ನಿಸುತ್ತಿಲ್ಲ. ಆದ್ರೆ ಆಗ ಮೈದಾನದಲ್ಲಿ ನಮಗೆ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಅಂತ ರೋಹಿತ್ ಶರ್ಮಾ ಧವನ್ ಹಾಡಿನ ಸ್ವಾರಸ್ಯಕರವಾದ ಘಟನೆಯನ್ನು ನೆನಪಿಸಿಕೊಂಡ್ರು.
ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸದ್ಯದ ಟೀಮ್ ಇಂಡಿಯಾದ ಯಶಸ್ವಿ ಆರಂಭಿಕ ಜೋಡಿ. ಇವರಿಬ್ಬರು ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅಲ್ಲದೆ ಈ ಜೋಡಿಯ ಜುಗುಲ್‍ಬಂದಿಯ ಮುಂದೆ ಎದುರಾಳಿ ಬೌಲರ್‍ಗಳು ಕೂಡ ದಂಗಾಗಿದ್ದಾರೆ. ಅಂದ ಹಾಗೇ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸರಣಿಯಲ್ಲಿ ಇವರಿಬ್ಬರು ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಿದ್ದರು.








