ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಸೇರಿಕೊಂಡ ರೋಹಿತ್ ಶರ್ಮಾ…!
ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಇಂದು (ಡಿಸೆಂಬರ್ 30ರಂದು) ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ.
14 ದಿನಗಳ ಕಾಲ ಕ್ಯಾರಂಟೈನ್ ನಲ್ಲಿದ್ದ ರೋಹಿತ್ ಶರ್ಮಾ ಸಿಡ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ್ರು ಎಂದು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ರೋಹಿತ್ ಶರ್ಮಾ ಗಾಯದ ನಡುವೆಯೂ ಫೈನಲ್ ಪಂದ್ಯವನ್ನು ಆಡಿ ಮುಂಬೈ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
ಆನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಅಲ್ಲದೆ ಫಿಟ್ ನೆಸ್ ಟೆಸ್ಟ್ ನಲ್ಲಿ ಪಾಸಾಗಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು.
ಆದ್ರೆ ಕೋವಿಡ್ ಮಾರ್ಗಸೂಚಿಯ ಪ್ರಕಾರ 14 ದಿನ ಕ್ವಾರಂಟೈನ್ ನಲ್ಲಿರಬೇಕಾಗಿತ್ತು. ಹೀಗಾಗಿ ಮೊದಲ ಎರಡು ಟೆಸ್ಟ್ ಪಂದ್ಯಕ್ಕೆ ಶರ್ಮಾ ಅಲಭ್ಯರಾಗಿದ್ದಾರೆ.
ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಆಗಮನ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಗೇ ರೋಹಿತ್ ಶರ್ಮಾ ಇಲ್ಲಿಯವರೆಗೆ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 53 ಇನಿಂಗ್ಸ್ ಗಳಲ್ಲಿ 59.26ರ ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. ಇದ್ರಲ್ಲಿ ಆರು ಶತಕ, ಒಂದು ದ್ವಿಶತಕ ಹಾಗೂ 10 ಅರ್ಧಶತಗಳಿವೆ.
ಈಗಾಗಲೇ ಟೆಸ್ಟ್ ಸರಣಿಯಲ್ಲಿ ಅಂತರವನ್ನು ಟೀಮ್ ಇಂಡಿಯಾ 1-1ರಿಂದ ಸಮಗೊಳಿಸಿದೆ. ಮೊದಲ ಟೆಸ್ಟ್ ಪಂದ್ಯದ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಿರುವ ರಹಾನೆ ಬಳಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡಿ ಎಂಟು ವಿಕೆಟ್ ಗಳಿಂದ ಜಯ ದಾಖಲಿಸಿದೆ.
ಇನ್ನೊಂದೆಡೆ ರೋಹಿತ್ ಶರ್ಮಾ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಾಗ ತಂಡದಿಂದ ಯಾರು ಹೊರಗುಳಿಯುತ್ತಾರೆ ಅನ್ನೋ ಪ್ರಶ್ನೆಯಾಗಿದೆ.
ಆರಂಭಿಕನಾಗಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ ಅಗರ್ ವಾಲ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಹೀಗಾಗಿ ಬಹುತೇಕ ಮಯಾಂಕ್ ಸ್ಥಾನದಲ್ಲಿ ರೋಹಿತ್ ಶರ್ಮಾ ತಂಡ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಮತ್ತು ಚೇತೇಶ್ವರ ಪೂಜಾರ ಕೂಡ ವೈಫಲ್ಯ ಅನುಭವಿಸಿದ್ದಾರೆ. ಇಲ್ಲಿ ಪೂಜಾರ ಮತ್ತು ಹನುಮ ವಿಹಾರಿ ಬದಲು ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ತಂಡದೊಳಗೆ ಸೇರಿಕೊಂಡ್ರೂ ಅಚ್ಚರಿ ಏನಿಲ್ಲ. ಆಗ ಮಯಾಂಕ್ ಅಗರ್ ವಾಲ್ ಗೆ ಮತ್ತೊಂದು ಅವಕಾಶ ಸಿಗಬಹುದು.
ಒಟ್ಟಿನಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾರು 11 ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕು.