ಬೆಳಗಾವಿಯಿಂದ ತಮ್ಮ ರಾಜ್ಯಗಳಿಗೆ ತೆರಳಲು ಹೊರ ರಾಜ್ಯಗಳ ಕಾರ್ಮಿಕರು ಸಾಲುಗಟ್ಟಿದ್ದು, ಇಂತಹ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲು ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನೋಂದಣಿ ಕಾರ್ಯ ಆರಂಭವಾಗಿದೆ. ಕರ್ನಾಟಕ ರಾಜ್ಯದ ಬೇರೆ ಬೇರೆ ಭಾಗಗಳು ಮತ್ತು ಬೆಳಗಾವಿಯಲ್ಲಿ ನೆಲೆಸಿದ್ದ ಬಿಹಾರ, ಜಾಖರ್ಂಡ್, ಉತ್ತರಾಖಂಡ, ರಾಜ್ಯಸ್ಥಾನದ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಕಳುಹಿಸುವಂತೆ ಜಿಲ್ಲಾಡಳಿವನ್ನು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಕ್ಕೆ ಹೋಗುವ ಕಾರ್ಮಿಕರನ್ನು ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಮಿಕರು ಸಿಪಿಎಸ್ ಮೈದಾನದಲ್ಲಿ ಬೀಡು ಬಿಟ್ಟಿದ್ದು, ತಮ್ಮ ನೋಂದಣಿ ಪಾಳಿಗಾಗಿ ಕಾಯುತ್ತಿದ್ದಾರೆ. ನೋಂದಣಿಗಾಗಿ ನೂರಾರು ಕಾರ್ಮಿಕರು ಕ್ಯೂ ನಿಂತಿದ್ದಾರೆ.
ಈ ಕುರಿತು ಕಾರ್ಮಿಕನೊಬ್ಬ ಮಾತನಾಡಿ, ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ. ಕುಟುಂಬಗಳನ್ನು ನಡೆಸುವುದೇ ಕಷ್ಟವಾಗಿದೆ. ಬೆಳಗಾವಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇವೆ, ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದರು. ಡ್ರೈವರ್ ಕೆಲಸ ಮಾಡುತ್ತಿರುವ ಸಂತೋಷ ಕುಮಾರ್ ಮಾತನಾಡಿ, ಬಹಳ ದಿನಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದೆ. ಇಂತಹ ಕಷ್ಟ ಬಂದಿರಲಿಲ್ಲ. ದಾರಿ ಕಾಣುತ್ತಿಲ್ಲ. ಊರಿಗೆ ಹೊರಟಿದ್ದೇವೆ ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ವೆಂಕಟೇಶ್ ಮಾತನಾಡಿ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ ಮೂಲದ ಕಾರ್ಮಿಕರು ಹೆಚ್ಚಿದ್ದಾರೆ. ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಅವರ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದ್ದೇವೆ. ಆರೋಗ್ಯ ತಪಾಸಣೆ ನಡೆಸಿ ಅವರನ್ನು ಕಳುಹಿಸಲಾಗುತ್ತಿದೆ ಎಂದರು.ನೋಂದಣಿಗಾಗಿ ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ಬಂದಿರುವ ಕಾರ್ಮಿಕರು ಮೈದಾನದಲ್ಲಿ ಬೀಡು ಬಿಟ್ಟಿದ್ದಾರೆ. ಕಾರ್ಮಿಕ ಕುಟುಂಬಗಳಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಇದ್ದು, ಇವರೆಲ್ಲ ಮೈದಾನದಲ್ಲಿ ಕಾದು ಕುಳಿತಿದ್ದಾರೆ. ಮಕ್ಕಳಿಗೆ ಮಹಿಳೆಯರು ಮೈದಾನದಲ್ಲಿಯೇ ಊಟ ಮಾಡಿಸುತ್ತಿದ್ದಾರೆ.








