ಆರ್.ಆರ್ ನಗರ ಯಾರ ಮುಡಿಗೇರುತ್ತೆ..!
ಶಿರಾ `ಕೈ’ ಹಿಡಿಯುತ್ತಾ..ಮುಡಿಗೇರುತ್ತಾ `ಕಮಲ’
ಬೆಂಗಳೂರು: ತೀವ್ರ ಜಿದ್ದಾಜಿದ್ದಾದಿನ ಕಣಗಳಾಗಿದ್ದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ.
ಬೆಳಿಗ್ಗೆ 8 ಗಂಟೆಯಿಂದ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಈ ಎರಡೂ ಉಪಸಮರದಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ.
ಮತ ಎಣಿಕೆ ಬಳಿಕ ಗೆದ್ದ ಅಭ್ಯರ್ಥಿಗಳ ಪರ ಮತಗಟ್ಟೆ ಸಮೀಪ ಬೆಂಬಲಿಗರ ಸಂಭ್ರಮಾಚರಣೆ ಹಾಗೂ ಪಟಾಕಿ ಸಿಡಿಸಲು ಅವಕಾಶ ಇಲ್ಲ.
ಮತ ಎಣಿಕೆ ಕೇಂದ್ರದ ಮುಂದಿನ ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಆರ್.ಆರ್ ನಗರ ಉಪಚುನಾವಣೆ ಅಭ್ಯರ್ಥಿಗಳಾದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಭವಿಷ್ಯ ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ.



ಶಿರಾ ಕ್ಷೇತ್ರದಲ್ಲಿ ಡಾ.ರಾಜೇಶ್‍ಗೌಡ, ಟಿ.ಬಿ ಜಯಚಂದ್ರ ಹಾಗೂ ಅಮ್ಮಾಜಮ್ಮ, ಈ ಮೂವರಲ್ಲ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವುದು ತೀವ್ರ ಕಾತರ ಎಚ್ಚಿಸಿದೆ.
ಮತ ಎಣಿಕೆ ಪ್ರಕ್ರಿಯೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 12ಗಂಟೆವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಕ್ಷೇತ್ರದಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಜತೆಗೆ ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಶಾಂತಿಯುತ ಮತದಾನ ನಡೆಸಲು ನಾಲ್ಕು ಹಂತದಲ್ಲಿ ಭದ್ರತೆ ನಡೆಸಲಾಗಿದೆ.
ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಾ..?
ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಆರ್.ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಶಿರಾದಲ್ಲಿ ಬಿಜೆಪಿಯ ಡಾ.ರಾಜೇಶ್ ಗೌಡ ಗೆಲ್ಲಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.



ಒಂದು ವೇಳೆ ಸಮೀಕ್ಷೆಗಳು ತಿಳಿಸಿದಂತೆ ಆದರೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಂತಾಗಲಿದೆ. 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಒಂದು ಬಾರಿಯೂ ಗೆದ್ದ ಉದಾಹರಣೆ ಇಲ್ಲ. ಹೀಗಾಗಿ ಎರಡು ಕ್ಷೇತ್ರಗಳನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
ಟಿ.ಬಿ ಜಯಚಂದ್ರಗೆ ಕೊರೊನಾ ಪಾಸಿಟಿವ್
ಶಿರಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ತೀವ್ರ ಕೆಮ್ಮು ಕಾಣಿಸಿಕೊಂಡು ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಟಿ.ಬಿ.ಜಯಚಂದ್ರ ಅವರ ಪತ್ನಿ ನಿರ್ಮಲಾ ಅವರಿಗೂ ಕೊರೊನಾ ಸೋಂಕು ತಗುಲಿದೆ.
ಟಿ.ಬಿ ಜಯಚಂದ್ರ ಅವರ ಅನುಪಸ್ಥಿತಿಯಲ್ಲಿ ಮತ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಕಾರ್ಯದಲ್ಲಿ ಎಲ್ಲರೂ ಧೈರ್ಯವಾಗಿ ಭಾಗಿಯಾಗಿ ಎಂದು ಜಯಚಂದ್ರ ಕಾರ್ಯಕರ್ತರಿಗೆ ಧೈರ್ಯ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








