IPL 2022- RR vs RCB – ರಾಜಸ್ತಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆಯಲ್ಲಿದೆ. ಚೊಚ್ಚಲ ಐಪಿಎಲ್ ನಲ್ಲಿ ಪ್ರಶಸ್ತಿ ಗೆದ್ದ ನಂತರ ರಾಜಸ್ತಾನ ರಾಯಲ್ಸ್ ತಂಡ ಕಳೆದ 13 ಸೀಸನ್ ಗಳಲ್ಲಿ ನೀರಸ ಪ್ರದರ್ಶನವನ್ನೇ ನೀಡಿತ್ತು. ಆದ್ರೆ ಈ ಬಾರಿ ಲೀಗ್ ಹಂತದಲ್ಲಿ ಬೊಂಬಾಟ್ ಪ್ರದರ್ಶನ ನೀಡಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತ್ತು.
ಆದಾಗ್ಯೂ ಕ್ವಾಲಿಫೇಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ. ಹೀಗಾಗಿ ಹಸಿದ ಹೆಬ್ಬುಲಿಯಾಗಿರುವ ರಾಜಸ್ಥಾನ್ ರಾಯಲ್ಸ್ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಲಿದೆ.
ಅಹ್ಮದಾಬಾದ್ ನ ಮೊಟೇರಾ ಅಂಗಳದಲ್ಲಿ ಇಂದು 15 ನೇ ಆವೃತ್ತಿ ಐಪಿಎಲ್ ನ ಎರಡನೇ ಕ್ವಾಲಿಫೆಯರ್ ಪಂದ್ಯ ನಡೆಯಲಿದೆ. ಈ ಪಂದ್ಯ ರಾಯಲ್ಸ್ ಬ್ಯಾಟಲ್ ಆಗಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಮೇಲ್ನೋಟಕ್ಕೆ ರಾಜಸ್ತಾನ ರಾಯಲ್ಸ್ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಪ್ರಬಲ ಆಟಗಾರರನ್ನು ಹೊಂದಿದೆ. ಹೀಗಾಗಿ ಸಂಘಟಿತ ಆಟವನ್ನು ಆಡಿದ್ರೆ ರಾಜಸ್ತಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲ್ಲುವ ಅವಕಾಶಗಳಿವೆ.
ಮುಖ್ಯವಾಗಿ ಬ್ಯಾಟಿಂಗ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಮಹತ್ವದ ಪಂದ್ಯಗಳಲ್ಲಿ ಅದ್ಭುತವಾಗಿ ಆಡುವ ಜೋಸ್ ಬಟ್ಲರ್ ಅವರ ಸದ್ಯದ ಫಾರ್ಮ್ ಬೆಂಗಳೂರು ತಂಡದ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಲಿದೆ.
ಹಾಗೇ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಇವರಿಬ್ಬರು ಉತ್ತಮ ಆರಂಭವನ್ನು ನೀಡಿದ್ರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಲಿದ್ದಾರೆ. ಹಾಗೇ ಶಿಮ್ರೋನ್ ಹೆಟ್ಮೇರ್ ಅವರು ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಇನ್ನೊಂದೆಡೆ ರಿಯಾನ್ ಪರಾಗ್ ಕೂಡ ಸ್ಫೋಟಕ ಆಟವನ್ನು ಆಡುವ ಸಾಮಥ್ಯ ಹೊಂದಿದ್ದಾರೆ. ಹೀಗಾಗಿ ಬ್ಯಾಟಿಂಗ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಹೆಚ್ಚಿನ ಚಿಂತೆ ಇಲ್ಲ.
ಮತ್ತೊಂದೆಡೆ ರಾಜಸ್ತಾನ ರಾಯಲ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರಗಳು ಅಂದ್ರೆ ಸ್ಪಿನ್ನರ್ ಗಳು. ಅದರಲ್ಲೂ ಆರ್. ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಅವರು ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದು ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.
ಅದೇ ರೀತಿ ವೇಗದ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ಮತ್ತು ಒಬೆಡ್ ಮೆಕಾಯ್ ಕೂಡ ಎದುರಾಳಿ ತಂಡಕ್ಕೆ ಮಾರಕವಾಗಿ ಪರಿಣಿಮಿಸಲಿದ್ದಾರೆ.
ಒಟ್ಟಿನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಸಂಘಟಿತ ಆಟದತ್ತ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಪ್ಲೆಯಿಂಗ್ ಇಲೆವೆನ್
ಯಶಸ್ವಿ ಜೈಸ್ವಾಲ್
ಜೋಸ್ ಬಟ್ಲರ್
ಸಂಜು ಸ್ಯಾಮ್ಸನ್ (ನಾಯಕ/ವಿ.ಕಿ.)
ದೇವದತ್ ಪಡಿಕ್ಕಲ್
ಶಿಮ್ರೋನ್ ಹೆಟ್ಮೇರ್
ರಿಯಾನ್ ಪರಾಗ್
ಆರ್. ಅಶ್ವಿನ್
ಟ್ರೆಂಟ್ ಬೌಲ್ಟ್
ಪ್ರಸಿದ್ಧ್ ಕೃಷ್ಣ
ಯುಜುವೇಂದ್ರ ಚಾಹಲ್
ಒಬೆಡ್ ಮೆಕಾಯ್
RR vs RCB – Rajasthan Royals Playing XI