ಚಿಕ್ಕೋಡಿ: ಕೇವಲ 10 ರೂ. ಆಸೆ ತೋರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಜಿಲ್ಲೆಯ ನಿಪ್ಪಾಣಿ (Nipani) ಪಟ್ಟಣದಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿಪ್ಪಾಣಿಯ ಬಾದಲ್‌ಪ್ಲಾಟ್‌ನಲ್ಲಿ (Badal Plot) ಈ ಘಟನೆ ನಡೆದಿದೆ. ಬೆಳಗಾವಿಯ ನಿಪ್ಪಾಣಿಯಲ್ಲಿ ಕಾಮುಕನೊಬ್ಬ 10 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆಸಿಫ್ ಭಾಗವಾನ ಎಂಬ ಕಾಮುಕನೇ ಈ ಭಯಾನಕ ಕೃತ್ಯ ಎಸಗಿದ ಪಾಪಿ.
ಬಾಲಕಿಯು ಇತ್ತೀಚೆಗೆ ನಡೆದ ಘಟನೆಯನ್ನು ಮನೆಯವರಿಗೆ ಹೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕಾಮುಕನು ಬಾಲಕಿಯ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಬಾಲಕಿ ಪಾಲಕರ ಮುಂದೆ ಹೇಳಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಬಾಲಕಿಯ ಕುಟುಂಬಸ್ಥರು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಈ ಘಟನೆ ಆ. 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.