ಬೆಂಗಳೂರು: “ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಸಂಘಟನೆಯು ಶತಮಾನೋತ್ಸವ ಆಚರಿಸುತ್ತಿರುವುದು ಈ ದೇಶದ ಅತಿದೊಡ್ಡ ದುರಂತ. ಆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೇ ಭಾಗವಹಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ,” ಎಂದು ಕಾಂಗ್ರೆಸ್ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗಾಂಧೀಜಿಯವರ 156ನೇ ಜನ್ಮದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಆರ್ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.
‘ದೇಶದ ಮೊದಲ ಉಗ್ರಗಾಮಿ ಗೋಡ್ಸೆ’
ಸತ್ಯ, ಶಾಂತಿ ಮತ್ತು ಅಹಿಂಸೆಯ ಮೂಲಕ ಜಗತ್ತಿಗೇ ಮಾದರಿಯಾದ ಗಾಂಧೀಜಿಯವರನ್ನು ಕೊಂದಿದ್ದು ಆರ್ಎಸ್ಎಸ್ ಸಿದ್ಧಾಂತ. ಆ ಸಂಘಟನೆಯ ಕಾರ್ಯಕರ್ತ ನಾಥೂರಾಮ್ ಗೋಡ್ಸೆಯೇ ಈ ದೇಶದ ಮೊದಲ ಉಗ್ರಗಾಮಿ. ಸರ್ವೋದಯ ಮತ್ತು ಸದ್ಭಾವನೆಯ ತತ್ವಗಳಿಗೆ ವಿರುದ್ಧವಾಗಿ ದ್ವೇಷವನ್ನೇ ಬೋಧಿಸುವ ಸಂಘಟನೆಯ 100ನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಪ್ರಸಾದ್ ಕಿಡಿಕಾರಿದರು.
ಪಟೇಲರೇ ನಿಷೇಧಿಸಿದ್ದ ಸಂಘಟನೆ, ಬ್ರಿಟಿಷರ ಬೂಟು ನೆಕ್ಕಿದವರು
ಹರಿಪ್ರಸಾದ್ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, “ಗಾಂಧೀಜಿ ಹತ್ಯೆಯಲ್ಲಿ ಆರ್ಎಸ್ಎಸ್ ಪಾತ್ರವನ್ನು ಮನಗಂಡು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಈ ಸಂಘಟನೆಯನ್ನು ನಿಷೇಧಿಸಿದ್ದರು. ಇತಿಹಾಸ ಹೀಗಿರುವಾಗ, ಅದೇ ಸಂಘಟನೆಯ ವೇದಿಕೆಯಲ್ಲಿ ಪ್ರಧಾನಿ ಕಾಣಿಸಿಕೊಳ್ಳುವುದು ರಾಷ್ಟ್ರಕ್ಕೆ ಮಾಡುವ ಅವಮಾನ,” ಎಂದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್ಎಸ್ಎಸ್ ಮತ್ತು ಸಾವರ್ಕರ್ ಬ್ರಿಟಿಷರ ಪರ ನಿಂತು ಅವರ ಬೂಟುಗಾಲನ್ನು ನೆಕ್ಕುತ್ತಿದ್ದರು. ಸಾವರ್ಕರ್ ಬ್ರಿಟಿಷರಿಂದಲೇ ಪೆನ್ಷನ್ ಪಡೆಯುತ್ತಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ ಇಂತಹ ದೇಶದ್ರೋಹಿ ಸಂಘಟನೆಯ ಸ್ಮರಣಾರ್ಥವಾಗಿ ಸ್ಮಾರಕ ನಾಣ್ಯಗಳನ್ನು ಹೊರತರುತ್ತಿರುವುದು ಲಕ್ಷಾಂತರ ಸ್ವಾತಂತ್ರ್ಯ ಯೋಧರ ಬಲಿದಾನಕ್ಕೆ ಮಾಡಿದ ಅಪಮಾನ, ಎಂದು ಆರೋಪಿಸಿದರು.
ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಬೇಕು
ಆರ್ಎಸ್ಎಸ್ ಶತಮಾನೋತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು. “62 ವರ್ಷಗಳ ಕಾಲ ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದ, ಸಂವಿಧಾನವನ್ನು ಒಪ್ಪದ ಸಂಘಟನೆಯೊಂದಿಗೆ ಪ್ರಧಾನಿ ನಿಂತಿರುವುದು ಅವರಿಗೆ ಶೋಭೆ ತರುವುದಿಲ್ಲ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಿ ರಾಜಕೀಯ ಮಾಡುವವರನ್ನು ಬೆಂಬಲಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ,” ಎಂದರು.
ದ್ವೇಷ ಬಿತ್ತುವವರ ವಿರುದ್ಧ ಶಸ್ತ್ರ ಹಿಡಿಯಬೇಕಾದೀತು
ತಮ್ಮ ಮಾತಿನ ಆಕ್ರೋಶವನ್ನು ತೀವ್ರಗೊಳಿಸಿದ ಹರಿಪ್ರಸಾದ್, “ಆರ್ಎಸ್ಎಸ್ ದೇಶದಾದ್ಯಂತ ಶಸ್ತ್ರಾಸ್ತ್ರಗಳನ್ನು ಬಳಸಿ ದಂಗೆ, ಗಲಭೆ ಮತ್ತು ಕೊಲೆಗಳನ್ನು ಮಾಡಿಸಿದೆ. ದೇಶದಲ್ಲಿ ಹಿಂಸೆಯ ಬೀಜ ಬಿತ್ತಿದ ಇಂತಹ ಸಂಘಟನೆಯ ವಿರುದ್ಧವೇ ಜನರು ಶಸ್ತ್ರಾಸ್ತ್ರ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇವರ ಚಟುವಟಿಕೆಗಳ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು,” ಎಂದು ಒತ್ತಾಯಿಸಿದರು.
ಇದೇ ವೇಳೆ, ಸಚಿವ ಸಂಪುಟದಲ್ಲಿ ಸ್ಥಾನಮಾನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅನಿಸಿಕೆಗಳು ಸಾಕಷ್ಟಿವೆ. ಬಿರಿಯಾನಿ ತಿನ್ನಬೇಕೆಂಬ ಆಸೆ, ಸದ್ಯಕ್ಕೆ ಚಿತ್ರಾನ್ನ ತಿಂದರೂ ಸಾಕು,” ಎಂದು ತಮ್ಮ ಅಸಮಾಧಾನವನ್ನು ವ್ಯಂಗ್ಯದ ಮೂಲಕ ಹೊರಹಾಕಿದರು.








