ರಾಯಚೂರು: ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ವೇಳೆ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗೆ ಸ್ವಜಾತಿಯವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕುರುಬ ಸಮಾಜ ಒಡೆಯುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಂಧನೂರಿನಲ್ಲಿ ನಡೆದ ಕುರುಬರ ಎಸ್ಟಿ ಮೀಸಲಾತಿ ಸಮಾವೇಶದಲ್ಲಿ ಪರ- ವಿರೋಧ ವ್ಯಕ್ತವಾಯಿತು.
ಸಿಂಧನೂರಿನಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಕುರುಬ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಕನಕ ಗುರುಪೀಠ ಮೂವರು ಸ್ವಾಮೀಜಿಗಳು ಭಾಗವಹಿಸಿದ್ದರು. ಸಮಾವೇಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು.
ಸಮಾವೇಶದಲ್ಲಿ ಮಾತನಾಡಿದ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ ವಿರುಪಾಕ್ಷಪ್ಪ, ನೇರವಾಗಿ ಸಿದ್ದರಾಮಯ್ಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಈಗ ಏನೇನೊ ಮಾತನಾಡುತ್ತಿದ್ದೀರಿ., ಈ ಹಿಂದೆ ಅಧಿಕಾರದಲ್ಲಿದ್ದಾಗ ಕತ್ತೆ ಕಾಯುತ್ತಿದ್ದೀರಾ ?, ಈಗಲಾದರೂ ಸ್ವಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ. ಈ ವಯಸ್ಸಿನಲ್ಲಿಯೂ ನೀವೇ ಖುರ್ಚಿಯಲ್ಲಿರಬೇಕು, ನೀವು ಹೇಳಿದಂತೆ ಕೇಳಬೇಕೆಂದರೆ ಹೇಗೆ. ಈಗ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ ಇಲ್ಲಿ ನನ್ನ ಸ್ವಪ್ರತಿಷ್ಠೆ ಏನು ಇಲ್ಲ. ಆರ್ಎಸ್ಎಸ್ ಎಂದೂ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಈ ಹೋರಾಟ ನಿಲ್ಲುವುದಿಲ್ಲ. ನಮ್ಮ ಹೋರಾಟ ಮೋದಿ ಹಾಗೂ ಅಮಿತ್ ಶಾರವರೆಗೂ ಮುಟ್ಟಲಿದೆ ಎಂದರು.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಹೆಚ್ ಎಂ ರೇವಣ್ಣ, ನಮ್ಮ ಹೋರಾಟ ಮೀಸಲಾತಿಗಾಗಿ. ಇಲ್ಲಿ ಯಾವುದೇ ವ್ಯಕ್ತಿಯ ಪರ ವಿರೋಧವಾಗಿ ಮಾತನಾಡುವುದು ಬೇಡ. ಭಿನ್ನಾಭಿಪ್ರಾಯಗಳನ್ನು ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಬಗೆಹರಿಸಿಕೊಳ್ಳೋಣ. ವೈಯಕ್ತಿಕವಾಗಿ ಯಾರನ್ನು ದೂಷಿಸುವುದು ಬೇಡ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀನಿಜಾನಂದ ಪುರಿ ಸ್ವಾಮೀಜಿ, ಇಲ್ಲಿ ಯಾವುದೇ ಗೊಂದಲಬೇಡ. ನಿಮ್ಮ ಗೊಂದಲಗಳೇನೆ ಇರಲಿ. ಈ ಗೊಂದಲಕ್ಕೆ ಜನ ಭಾಗಿಯಾಗುವುದಿಲ್ಲ. ಜನವರಿ 15ರಿಂದ ಪಾದಯಾತ್ರೆ ನಡೆಯುತ್ತಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ನಮ್ಮ ಹಕ್ಕೋತ್ತಾಯ ಮಾಡಲಾಗುವುದು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel