ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಆರ್ಥಿಕ ಮೂಲ ಯಾವುದು, ಅದಕ್ಕೆ ವಿದೇಶದಿಂದ ಹಣ ಬರುತ್ತದೆಯೇ ಮತ್ತು ಸಂಘವು ತೆರಿಗೆ ಪಾವತಿಸುತ್ತದೆಯೇ ಎಂದು ಪ್ರಶ್ನಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಂಘವು ಹಳೆಯ ಸಂದೇಶವೊಂದನ್ನು ಮುನ್ನೆಲೆಗೆ ತರುವ ಮೂಲಕ ತಿರುಗೇಟು ನೀಡಿದೆ. ಸಂಘದ ಗುರುದಕ್ಷಿಣೆ ಡೊನೇಷನ್ ಅಲ್ಲ, ಡಿವೋಷನ್ (ಅದು ದೇಣಿಗೆಯಲ್ಲ, ಭಕ್ತಿಪೂರ್ವಕ ಸಮರ್ಪಣೆ) ಎಂಬ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಆರ್ಎಸ್ಎಸ್ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ.
ಕಳೆದ ಕೆಲವು ದಿನಗಳಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿದ್ದು, ಸಂಘದ ಕಾರ್ಯವೈಖರಿ ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಂಘವು ತನ್ನ ಸಿದ್ಧಾಂತವನ್ನು ಸ್ಪಷ್ಟಪಡಿಸಿದೆ.
ಮೋಹನ್ ಭಾಗವತ್ ಸ್ಪಷ್ಟನೆ ಏನಾಗಿತ್ತು?
ಸಂಘದ ಆರ್ಥಿಕ ಮೂಲದ ಬಗ್ಗೆ ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ನವೆಂಬರ್ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಸ್ಪಷ್ಟನೆ ನೀಡಿದ್ದರು. ಆ ವಿಡಿಯೋವನ್ನು ಈಗ ಸಂಘದ ಬೆಂಬಲಿಗರು ಮತ್ತು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಂದು ಮಾತನಾಡಿದ್ದ ಭಾಗವತ್, ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಹಾಗೂ ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ಸಂಘದ ಪ್ರತಿಯೊಬ್ಬ ಸ್ವಯಂಸೇವಕನೂ ಸ್ವ-ಇಚ್ಛೆಯಿಂದ ಗುರುದಕ್ಷಿಣೆ ನೀಡುತ್ತಾನೆ. ಇದು ಕೇವಲ ಹಣಕಾಸಿನ ವಿಚಾರವಲ್ಲ, ಇದು ಸಂಘಟನೆಗೆ ಮತ್ತು ತಾಯ್ನಾಡಿಗೆ ಸಲ್ಲಿಸುವ ಸಮರ್ಪಣಾ ಭಾವವಾಗಿದೆ. ಸಂಘವು ಸಮಾಜವನ್ನು ಬಲಪಡಿಸುವ ಕಾಯಕದಲ್ಲಿ ತೊಡಗಿದೆಯೇ ಹೊರತು ರಾಜಕೀಯ ಲಾಭಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪಗಳೇನು?
ಭಾನುವಾರ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಹಣಕಾಸಿನ ಮೂಲಗಳ ಬಗ್ಗೆ ಗಂಭೀರ ಸಂಶಯ ವ್ಯಕ್ತಪಡಿಸಿದ್ದರು. ಮೋಹನ್ ಭಾಗವತ್ ಅವರು ಸಂಘವು ದೇಣಿಗೆ ಪಡೆಯುವುದಿಲ್ಲ, ಗುರುದಕ್ಷಿಣೆ ಮಾತ್ರ ಪಡೆಯುತ್ತದೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಇವರದ್ದು ಜಗತ್ತಿನಾದ್ಯಂತ ಹಬ್ಬಿರುವ ಬಲವಾದ ನೆಟ್ವರ್ಕ್ ಆಗಿದೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಹಲವು ವಿದೇಶಗಳಿಂದ ಇವರಿಗೆ ದೊಡ್ಡ ಮಟ್ಟದ ಫಂಡಿಂಗ್ ಹರಿದು ಬರುತ್ತಿದೆ. ತಮ್ಮ ಧ್ವಜದ ಹೆಸರಿನಲ್ಲಿ ಗುರುದಕ್ಷಿಣೆ ಪಡೆಯುವ ಮೂಲಕ ಸುಮಾರು 2,500 ಸಂಘಟನೆಗಳ ಜಾಲವನ್ನು ನಿರ್ವಹಿಸುತ್ತಿದ್ದಾರೆ. ಇವರು ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಖರ್ಗೆ ನೇರವಾಗಿ ಆರೋಪಿಸಿದ್ದರು.
ದೆವ್ವ ಮತ್ತು ನೆರಳು ವಿವಾದಾತ್ಮಕ ಹೇಳಿಕೆ
ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದ ಖರ್ಗೆ, ಆರ್ಎಸ್ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ದೆವ್ವ ಮತ್ತು ನೆರಳಿಗೆ ಹೋಲಿಸಿದ್ದರು. ಆರ್ಎಸ್ಎಸ್ ದೆವ್ವ ಇದ್ದಂತೆ, ಬಿಜೆಪಿ ಆ ದೆವ್ವದ ಕರಿ ನೆರಳು. ನಾವು ಕೇವಲ ನೆರಳಿನ ಜೊತೆ ಹೋರಾಡಿದರೆ ಸಾಲದು, ಮೂಲವಾಗಿರುವ ದೆವ್ವದ ಜೊತೆಯೇ ಹೋರಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ, 57 ವರ್ಷಗಳ ಕಾಲ ದೇಶದ ತ್ರಿವರ್ಣ ಧ್ವಜವನ್ನು ಹಾರಿಸದವರು ಈಗ ನಮಗೆ ದೇಶಪ್ರೇಮದ ಪಾಠ ಹೇಳಿಕೊಡಲು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು.
ಸಂಘವನ್ನು ನೋಂದಣಿ ಮಾಡಿಸೇ ತೀರುತ್ತೇನೆ ಎಂದ ಖರ್ಗೆ
ಆರ್ಎಸ್ಎಸ್ ಇದುವರೆಗೂ ಅಧಿಕೃತವಾಗಿ ನೋಂದಣಿ ಆಗಿಲ್ಲದಿರುವ ವಿಚಾರವನ್ನು ಪ್ರಸ್ತಾಪಿಸಿದ ಖರ್ಗೆ, ತಾವು ಅದನ್ನು ನೋಂದಣಿ ಮಾಡಿಸಿಯೇ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಆರ್ಎಸ್ಎಸ್ ತಾನು ವ್ಯಕ್ತಿಗಳ ಸಮೂಹ ಎಂದು ಹೇಳಿಕೊಳ್ಳುವ ಮೂಲಕ ನೋಂದಣಿಯಿಂದ ನುಣಚಿಕೊಳ್ಳುತ್ತಿದೆ. ಆದರೆ ಇವತ್ತಲ್ಲದಿದ್ದರೂ ನಾಳೆ ಸಂಘವು ನೋಂದಣಿ ಆಗಲೇಬೇಕು. ಕಾನೂನಿನ ಅಡಿಯಲ್ಲಿ ಅದನ್ನು ನಾನೇ ಮಾಡಿಸುತ್ತೇನೆ ಎಂದು ಖರ್ಗೆ ಶಪಥ ಮಾಡಿದ್ದಾರೆ.
ಒಟ್ಟಿನಲ್ಲಿ, ಗುರುದಕ್ಷಿಣೆ ಎಂಬುದು ಹಣಕಾಸಿನ ವ್ಯವಹಾರವೋ ಅಥವಾ ಭಕ್ತಿಯ ಸಮರ್ಪಣೆಯೋ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಆರೆಸ್ಸೆಸ್ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.








