ರಾಜ್ಯದಲ್ಲೆಡೆ ಯಾವುದೇ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಮೊದಲು ಮುಂದೆ ಬರುವಲ್ಲಿ ಆರ್ ಎಸ್ ಎಸ್ ಮುಂದೆ ಬರುತ್ತಿತ್ತು. ಹಾಗೆಯೇ ಸದ್ಯ ಬೆಂಗಳೂರು ಮಹಾನಗರದಲ್ಲಿ ಕೋವಿಡ್ ಇನ್ನಿಲ್ಲದಂತೆ ಕಾಡಲು ಮುಂದಾಗಿದೆ. ಕೊರೋನಾ ಭೀತಿಯಿಂದ ಜರ್ಜರಿತರಾಗಿರುವ ಜನಕ್ಕೆ ಧೈರ್ಯ ತುಂಬಲು ಹಾಗೂ ಜಾಗೃತಿಗಾಗಿ ಬೂತ್ ಮಟ್ಟದಲ್ಲಿ ಸೇವೆ ಸಲ್ಲಿಸಲು ಆರ್‍ಎಸ್ಎಸ್ ಸ್ವಯಂ ಸೇವಕರು ಸಜ್ಜಾಗುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾದವರು ನಿಯಮಗಳನ್ನು ಉಲ್ಲಂಘಿಸುವಬರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸ್ವಯಂಸೇವಕರ ಮೂಲಕ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಹೆಚ್ಚಿನ ನಿಗಾ ಹಾಗೂ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿರುವ ಸುಮಾರು 8500 ಬೂತ್‌ಗಳಿದ್ದು, 40 ಸಾವಿರ ಸ್ವಯಂಸೇವಕರ ಅವ್ಯಶಕತೆ ಈಗ ಬಿಬಿಎಂಪಿಗೆ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ 10 ಸಾವಿರ ಸ್ವಯಂಸೇವಕರನ್ನು ಒದಗಿಸುವ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಬಿಬಿಎಂಪಿಯ ಅಧಿಕಾರಿಗಳು ಆರ್.ಎಸ್.ಎಸ್ ನ ಮಹಾನಗರ ವ್ಯಾಪ್ತಿಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಸ್ವಯಂಸೇವಕರು ಬಿಬಿಎಂಪಿಯಿಂದ ಕ್ವಾರಂಟೈನ್ ವಾಚ್‌ಗಾಗಿ ರಚಿಸಿರುವ ಆ್ಯಪ್ ಮೂಲಕ ನೋಂದಣಿ ಕಾರ್ಯ ಆರಂಭಿಸಿದ್ದಾರೆ.
ಈಗಾಗಲೇ 2 ಸಾವಿರ ಸ್ವಯಂ ಸೇವಕರು ನೋಂದಣಿಯಾಗಿದ್ದಾರೆ. ಅರೆಸ್ಸೆಸ್ ಜತೆಗೆ ಇನ್ನು ಕೆಲವು ಸಂಘಟನೆಗಳ ಸ್ವಯಂಸೇವಕರು ಬಿಬಿಎಂಪಿ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆ್ಯಪ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಿ, ನೋಂದಣಿ ಮಾಡಿಕೊಂಡ ನಂತರ ಅಲ್ಲಿಯೇ ಒಂದು ಐಡಿ ಸಿಗಲಿದೆ. ಅದನ್ನು ಪ್ರಿಂಟ್ ಔಟ್ ತೆಗೆದುಕೊಂಡು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಬಿಬಿಎಂಪಿಯ ಸೂಚನೆಯಂತೆ ಬೂತ್‌ಗಳಲ್ಲೇ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಬೂತ್‌ನಲ್ಲಿ ಕ್ವಾರಂಟೈನ್ ಆಗಲು ಇರುವವರನ್ನು ಪತ್ತೆ ಹಚ್ಚಿ, ಬಿಬಿಎಂಪಿಗೆ ಸಹಾಯ ಮಾಡಲಿದ್ದಾರೆ. ಹಾಗೆಯೇ ತಮ್ಮ ಬೂತ್ ವ್ಯಾಪ್ತಿಯಲ್ಲಿ ನಿಯಮ ಮೀರಿದವರ ಮಾಹಿತಿ ಸಂಗ್ರಹಿಸಿ, ಬಿಬಿಎಂಪಿಗೆ ಒದಗಿಸಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು. ಒಟ್ಟಿನಲ್ಲಿ ಪ್ರಕೃತಿ ವಿಕೋಪಗಳ ಸಂಧರ್ಭಗಳಲ್ಲಿ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವ ಆರ್ ಎಸ್ ಎಸ್ ಸ್ವಯಂ ಸೇವಕರು, ಕೊವಿಡ್ ಅನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.