ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಅಧಿಪತ್ರ ಚಿತ್ರದಲ್ಲಿ ಕರಾವಳಿ ಭಾಗದ ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಕಟ್ಟಿಕೊಡಲಾಗಿದೆ.
ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಮೊದಲಾದ ಕರಾವಳಿ ವಿಶೇಷತೆಯನ್ನು ಈ ಸಿನಿಮಾದ ಕಥೆಯಲ್ಲಿ ಹೊಸ ರೀತಿಯಲ್ಲಿ ಹೆಣೆಯಲಾಗಿದೆ.
ಚಿತ್ರವನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದ್ದು, ಈಗಾಗಲೇ ಡಬ್ಬಿಂಗ್ ಹಾಗೂ ಓಟಿಟಿ ಹಕ್ಕುಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.
ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಿರೂಪಕಿ ಜಾಹ್ನವಿ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಎಂ.ಕೆ. ಮಠ, ಪ್ರಶಾಂತ್, ಅನಿಲ್ ಉಪ್ಪಾಲ್ ಸೇರಿದಂತೆ ಹಲವಾರು ನುರಿತ ಕಲಾವಿದರು ನಟಿಸಿದ್ದಾರೆ.
ಅಧಿಪತ್ರ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿದೆ. ಇದು ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುವ ಕಥೆಯಾಗಿ ಮೂಡಿಬರಲಿದೆ. ಕೆ.ಆರ್. ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ದಿವ್ಯಾ ನಾರಾಯಣ್, ಕುಲದೀಪ್ ರಾಘವ್, ಮತ್ತು ಲಕ್ಷ್ಮೇ ಗೌಡ ಅವರು ಬಂಡವಾಳ ಹೂಡಿದ್ದಾರೆ. ಜೊತೆಗೆ ಕಾರ್ತಿಕ್ ಶೆಟ್ಟಿ, ಸತೀಶ್ ಶೆಟ್ಟಿ, ಮತ್ತು ಶ್ವೇತಾ ರವಿಚಂದ್ರ ಶೆಟ್ಟಿ ಸಹ-ನಿರ್ಮಾಪಕರಾಗಿದ್ದಾರೆ.
ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್ ನಲ್ಲಿ ಜನವರಿ 27 ರಂದು ಬಿಡುಗಡೆ ಆಗಲಿದ್ದು, ಇದರೊಂದಿಗೆ ಚಿತ್ರಕ್ಕೆ ಇನ್ನಷ್ಟು ಕ್ರೇಜ್ ಸಿಗಲಿದೆ. ಫೆಬ್ರವರಿ 7ರಂದು ಅಧಿಪತ್ರ ತೆರೆಗೆ ಅಬ್ಬರಿಸಲಿದೆ.
ಪ್ರೇಕ್ಷಕರು ಈಗಾಗಲೇ ಈ ಸಿನಿಮಾದ ನಿರೀಕ್ಷೆಯಲ್ಲಿದ್ದು, ಬಿಡುಗಡೆ ದಿನಕ್ಕೆ ಕೌಂಟ್ಡೌನ್ ಶುರುವಾಗಿದೆ!