ಭಾರತ–ರಷ್ಯಾ ನಡುವೆ ದಶಕಗಳಿಂದ ಬೆಳೆದಿರುವ ದಿಟ್ಟ ಮತ್ತು ಆಳವಾದ ಸ್ನೇಹವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನಡೆದ ಸಭೆಯ ನಂತರ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದೇಶಗಳ ಬಲವಾದ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರ್ಧಾರಗಳನ್ನು ಹಂಚಿಕೊಂಡರು.
ರಷ್ಯಾ ನಮಗೆ ಹಿಂದಿನಿಂದಲೂ ನಿಜವಾದ ಮಿತ್ರರಾಷ್ಟ್ರ. ಅನೇಕ ಕ್ಷೇತ್ರಗಳಲ್ಲಿ ರಷ್ಯಾ ನಮ್ಮೊಂದಿಗೆ ನಿಂತಿದೆ. ವಿಶೇಷವಾಗಿ ಯೂರಿಯಾ ಉತ್ಪಾದನೆಯಲ್ಲಿ ಭಾರತಕ್ಕೆ ನೀಡುತ್ತಿರುವ ಸಹಕಾರ ತುಂಬಾ ಮಹತ್ವದ್ದು ಎಂದು ಪಿಎಂ ನರೇಂದ್ರ ಮೋದಿ ಹೇಳಿದರು.
2030ರವರೆಗೆ ಭಾರತ–ರಷ್ಯಾ ನಡುವಿನ ಆರ್ಥಿಕ ಸಹಕಾರಕ್ಕಾಗಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ ಎನರ್ಜಿ, ವ್ಯಾಪಾರ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಉಭಯ ದೇಶಗಳು ಹೊಸ ಹಾದಿ ಹಿಡಿಯಲಿವೆ. ಈ ಒಪ್ಪಂದ ನಮ್ಮ ಆರ್ಥಿಕತೆಗೆ ದೊಡ್ಡ ಬಲವನ್ನು ನೀಡಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ರಷ್ಯಾದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವ ಯೋಜನೆಯನ್ನು ಪ್ರಕಟಿಸಿದ ಅವರು ಇದರಿಂದ ಪ್ರವಾಸೋದ್ಯಮ ಹೆಚ್ಚಳ ಕಾಣುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ನಂಬಿದೆ ಎಂದು ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಸ್ನೇಹ, ಜಾಗತಿಕ ರಾಜಕೀಯದಲ್ಲೂ ಮಹತ್ತರ ಪಾತ್ರ ವಹಿಸುತ್ತಿದೆ. ರಕ್ಷಣಾ ಸಹಕಾರ, ಇಂಧನ ರಫ್ತು-ಆಮದು ಹಾಗೂ ಬಾಹ್ಯಾಕಾಶ ಸಂಶೋಧನೆಗಳಲ್ಲಿನ ಸಹಭಾಗಿತ್ವವೂ ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಸ್ತರಿಸಲಿದೆ ಎಂದು ಅವರು ತಿಳಿಸಿದರು.








