ಉಕ್ರೇನ್ ರಷ್ಯಾ ಬಿಕ್ಕಟ್ಟು – ಯುದ್ಧದ 21 ನೇ ದಿನದ ಅಪ್ಡೇಟ್…..
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ 21 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಸೈನ್ಯಕ್ಕೆ ಭಾರೀ ಹಾನಿಯನ್ನುಂಟುಮಾಡಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. 13800 ಸೈನಿಕರನ್ನು ಕೊಲ್ಲುವುದರ ಜೊತೆಗೆ, ಉಕ್ರೇನ್‌ನ ಅನೇಕ ಮಿಲಿಟರಿ ಉಪಕರಣಗಳನ್ನು ಸಹ ನಾಶಪಡಿಸಿದ್ದೇವೆ ಎಂದು ಉಕ್ರೇನ್ ಹೇಳಿದೆ. ಭಾರೀ ನಷ್ಟದ ನಂತರವೂ, ರಷ್ಯಾ ಯುದ್ಧ ನಿಲ್ಲಿಸುವ ಮುನ್ಸೂಚನೆ ಕಾಣುತ್ತಿಲ್ಲ. ಉಕ್ರೇನ್ ಯುದ್ಧದ 21 ನೇ ದಿನದಂದು ಹಲವೆಡೆ ಸ್ಫೋಟದ ಸದ್ದು ಕೇಳುತ್ತಿದೆ. ಹಲವು ನಗರಗಳಲ್ಲಿ ವೈಮಾನಿಕ ದಾಳಿ ಎಚ್ಚರಿಕೆ ನೀಡಲಾಗಿದೆ.
ಪೋಲೆಂಡ್, ಜೆಕ್ ಗಣರಾಜ್ಯ ಮತ್ತು ಸ್ಲಾವಾಕಿಯಾದ ಪ್ರಧಾನ ಮಂತ್ರಿಗಳು ಮಂಗಳವಾರ ಕೈವ್‌ಗೆ ಭೇಟಿ ನೀಡಿದ ನಂತರ ಬುಧವಾರ ಬೆಳಿಗ್ಗೆ ಪೋಲೆಂಡ್‌ಗೆ ಮರಳಿದರು. ಈ ನಾಯಕರ ಭೇಟಿಯು ಉಕ್ರೇನ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದಾಗಿತ್ತು.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅಬುಧಾಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಕ್ರೇನ್ ಮುಂದಿನ ದಿನಗಳಲ್ಲಿ ನ್ಯಾಟೋಗೆ ಸೇರ್ಪಡೆಗೊಳ್ಳುವ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ನ್ಯಾಟೋಗೆ ಸೇರುವುದಿಲ್ಲ ಎಂದು ಹೇಳಿದ್ದರು.
ಶಾಂತಿ ಒಪ್ಪಂದದ ಭಾಗವಾಗಿ ಉಕ್ರೇನ್‌ಗೆ ತಟಸ್ಥ ಸ್ಥಾನಮಾನದ ಕುರಿತು ಕೈವ್‌ನೊಂದಿಗೆ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನಿಯನ್ ನಗರದ ಸ್ಕಾಡೋವ್ಸ್ಕ್ ಮೇಯರ್ ಓಲೆಕ್ಸಾಂಡರ್ ಯಾಕೋವ್ಲೆವ್ ಅವರನ್ನು ಒತ್ತೆಯಾಳಾಗಿ ತೆಗೆದುಕೊಂಡಿವೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಹೇಳಿದ್ದಾರೆ. ಈ ನಗರವು ಖರ್ಸನ್ ಪ್ರದೇಶದ ಅಡಿಯಲ್ಲಿ ಬರುತ್ತದೆ.








