Russia vs ukraine | ಕನ್ನಡಿಗರ ರಕ್ಷಣೆಗೆ ಕುಮಾರಸ್ವಾಮಿ ಮನವಿ
ಬೆಂಗಳೂರು : ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ʼನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರಕಾರವೇ ನೀಡಿದೆ. ಆ ದೇಶದ ಕೀವ್ ನಗರ ಸೇರಿ ವಿವಿಧೆಡೆ ಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಎಲ್ಲ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕು.
ಶೆಲ್, ಕ್ಷಿಪಣಿ, ಬಾಂಬ್ ದಾಳಿ ಭೀತಿಯಿಂದ ವಿದ್ಯಾರ್ಥಿಗಳು ಬಂಕರ್ʼಗಳಲ್ಲಿ & ಮೆಟ್ರೋ ರೈಲು ಅಂಡರ್ʼಗ್ರೌಂಡ್ʼನಲ್ಲಿ ಆಶ್ರಯ ಪಡೆದಿದ್ದಾರೆ. ಆ ದೃಶ್ಯಗಳು ಕಳವಳಕಾರಿ. ಸ್ಫೋಟದ ಸದ್ದು ಕೇಳಿಸಿಕೊಂಡು ಕ್ಷಣಕ್ಷಣಕ್ಕೂ ಭಯಭೀತಿಯಲ್ಲಿರುವ ಅವರೆಲ್ಲರನ್ನು ನೋಡಿದರೆ ಯುದ್ಧದ ಭೀಕರತೆ ಎಂಥದ್ದು ಎಂಬುದನ್ನು ಅರಿಯಬಹುದು. ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ, ಇಲ್ಲಿ ಅವರ ತಂದೆ-ತಾಯಿ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಉಕ್ರೇನ್ʼನಲ್ಲಿ ಬಾಂಬ್ʼಗಳ ಮೊರೆತಕ್ಕೆ ಅವರು ಮತ್ತಷ್ಟು ಕಂಗಾಲಾಗುತ್ತಿದ್ದಾರೆ.
ನಾನು ಕೂಡ ಕನ್ನಡಿಗರ ರಕ್ಷಣೆಗೆ ನೇಮಕಗೊಂಡಿರುವ ಉಸ್ತುವಾರಿ ಅಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರಕಾರವು ತನ್ನೆಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್ʼನಲ್ಲಿರುವ ಎಲ್ಲ ಕನ್ನಡಿಗರನ್ನೂ ಏರ್ʼಲಿಫ್ಟ್ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
russia-vs-ukraine-H D Kumaraswamy tweet









