ಪ್ರೇಕ್ಷಕರಿಲ್ಲದೆ 2020ರ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಾ ?
2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯನ್ನು ಸಂಘಟಿಸಲು ಅಮೆರಿಕಾ ಟೆನಿಸ್ ಸಂಸ್ಥೆಯು ಮುಂದಾಗಿದೆ. ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಆಯೋಜಿಸಲು ಎಲ್ಲಾ ರೀತಿಯನ್ನು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮತ್ತೊದೆಡೆ ಕೊರೋನಾ ವೈರಸ್‍ನಿಂದಾಗಿ ಅಗ್ರ ಶ್ರೇಯಾಂಕಿತ ಆಟಗಾರರು ಗೈರು ಆಗುವಂತಹ ಸಾಧ್ಯತೆಗಳೂ ಇವೆ. ಆದ್ರೂ ಕೂಡ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯಂತೆ ಸಂಘಟಿಸಲಾಗುವುದು ಎಂದು ಅಮೆರಿಕಾದ ದಿನಪ್ರತಿಕೆಯೊಂದು ವರದಿ ಮಾಡಿದೆ.
ಎಟಿಪಿ ಮತ್ತು ಡಬ್ಲ್ಯೂಟಿಎ ಸಹಕಾರದೊಂದಿಗೆ ಯುಎಸ್‍ಓಪನ್ ಟೆನಿಸ್ ಟೂರ್ನಿಯು ಆಗಸ್ಟ್ 31ರಿಂದ
ಸೆಪ್ಟಂಬರ್ 13ರವರೆಗೆ ನಡೆಸಲಾಗುವುದು. ಆದ್ರೆ ಸ್ಥಳಿಯ ಮತ್ತು ರಾಜ್ಯದ ಆರೋಗ್ಯ ಅಧಿಕಾರಿಗಳು ಅನುಮತಿ ನೀಡಬೇಕಾಗಿದೆ. ನಾವು ನಿಗದಿಪಡಿಸಿದ್ದ ವೇಳಾಪಟ್ಟಿಯಂತೆ ಟೂರ್ನಿಯನ್ನು ಆಯೋಜಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಬಗ್ಗೆ ನಮಗೆ ಭರವಸೆ ಇದೆ, ಸದ್ಯದಲ್ಲೇ ಟೂರ್ನಿಯ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಅಮೆರಿಕಾ ಟೆನಿಸ್ ಸಂಸ್ಥೆಯಿಂದ ತಿಳಿದು ಬಂದಿದೆ.
ಕಳೆದ ಮಾರ್ಚ್‍ನಿಂದ ಯಾವುದೇ ಟೆನಿಸ್ ಟೂರ್ನಿಗಳು ನಡೆದಿಲ್ಲ. ವಿಂಬಲ್ಡನ್ ಟೂರ್ನಿಯನ್ನು 75 ವರ್ಷಗಳ ಬಳಿಕ ಇದೇ ಮೊದಲ ಬಾರಿ ರದ್ದು ಮಾಡಲಾಗಿದೆ. ಹಾಗೇ ಫ್ರೆಂಚ್ ಓಪನ್ ಟೂರ್ನಿಯನ್ನು ಮುಂದೂಡಲಾಗಿದೆ. ಇನ್ನೊಂದೆಡೆ ಅಗ್ರ ಶ್ರೇಯಾಂಕಿತ ಆಟಗಾರ ನುವಾನ್ ಜಾಕೊವಿಕ್ ಮತ್ತು ರಫೆಲ್ ನಡಾಲ್ ಅವರು ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟತೆ ನೀಡಿಲ್ಲ. ರಫೆಲ್ ನಡಾಲ್ ಅವರು ಸದ್ಯದ ಪರಿಸ್ಥಿತಿಯಲ್ಲಿ ಯುಎಸ್ ಓಪನ್ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ರು. ಹಾಗೇ ಜಾಕೋವಿಕ್ ಕೂಡ. ರೋಜರ್ ಫೆಡರರ್ ಗಾಯದಿಂದ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಅಲ್ಲದೆ ಕೋವಿಡ್ -19 ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ನ್ಯೂಯಾರ್ಕ್ ನಗರದಲ್ಲಿ ಕೊರೋನಾ ಹಾವಳಿ ಕೂಡ ಜಾಸ್ತಿಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಯುಎಸ್ ಓಪನ್ ಟೂರ್ನಿಗೆ ಪ್ರೇಕ್ಷಕರು ಬಿಡಿ, ಆಟಗಾರರು ಭಾಗವಹಿಸುವುದು ಕಷ್ಟಕರವಾಗಿದೆ.








