ಇದೇ ಲಾಸ್ಟ್ ಲಾಕ್ ಡೌನ್, ಇನ್ಮುಂದೆ ಎಲ್ಲೂ ಲಾಕ್ ಡೌನ್ ಮಾಡಲ್ಲ: ಎಸ್.ಟಿ. ಸೋಮಶೇಖರ್
ಬೆಂಗಳೂರು : ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೆ ಕೆಲವು ಭಾಗಗಳಲ್ಲಿ ಕೆಲ ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದನ್ನು ಮುಂದುವರಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇದೀಗ ಎಲ್ಲಾ ಚರ್ಚೆಗಳಿಗೂ ಸಚಿವ ಎಸ್ ಟಿ ಸೋಮಶೇಖರ್ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕೊನೆಯ ಲಾಕ್ಡೌನ್. ಇನ್ಮುಂದೆ ರಾಜ್ಯದಲ್ಲಿ ಎಲ್ಲೂ ಲಾಕ್ಡೌನ್ ಮಾಡುವುದಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪಾಸಿಟಿವ್ ಬಂದ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡುತ್ತೇವೆ. ಒಟ್ಟಿಗೆ ಎರಡ್ಮೂರು ಮನೆಯವರಿಗೆ ಕೋವಿಡ್ 19 ಪಾಸಿಟಿವ್ ಬಂದರೆ ರಸ್ತೆ ಮಾತ್ರ ಸೀಲ್ಡೌನ್ ಆಗಲಿದೆ. ಅಲ್ಲಿ ಮಾತ್ರ ಸೀಲ್ಡೌನ್ ಇರುತ್ತದೆ. ಆದರೆ ಲಾಕ್ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮೈಸೂರಿನಲ್ಲಿ ನಾಲ್ಕೈದು ದಿನದಿಂದ ಕೊರೊನಾ ಹೆಚ್ಚಾಗುತ್ತಿದೆ. ಈ ಸಂಬಂಧ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಮೈಸೂರಿನಲ್ಲಿ ಟಾಸ್ಕ್ ಫೋರ್ಸ್ ತಂಡ ನೇಮಕ ಮಾಡಿ ಅವರ ಸೂಚನೆಯಂತೆ ಕೆಲಸ ಮಾಡಲು ಅಧಿಕಾರಿಗಳು ಇರುತ್ತಾರೆ. ಶಾಸಕ ತನ್ವೀರ್ ಸೇಠ್ಗೆ ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ವಿಶೇಷ ಗಮನ ಹರಿಸಿದ್ದೇವೆ ಎಂದರು.