ಬೆಂಗಳೂರು: ಪ್ರಸಿದ್ಧ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಡಿಯಾ ತನ್ನ ಮುಂಬರುವ ಮೊಬೈಲ್ ಗೇಮ್ ‘ಬಿಜಿಎಂಐ ಲೈಟ್’ ಹೆಸರನ್ನು ‘ಬಿಜಿಎಂಐ ಏರ್’ ಎಂದು ಅಧಿಕೃತವಾಗಿ ಬದಲಾಯಿಸಿದೆ. ಭಾರತದಲ್ಲಿ ಈ ಗೇಮ್ನ ಬಿಡುಗಡೆಗೂ ಮುನ್ನವೇ ಬರೋಬ್ಬರಿ 1 ಕೋಟಿಗೂ ಅಧಿಕ ಗೇಮರ್ಗಳು ಪ್ರಿ-ರಿಜಿಸ್ಟ್ರೇಷನ್ ಮಾಡಿಕೊಂಡಿದ್ದು, ಹೊಸ ಮೈಲಿಗಲ್ಲು ತಲುಪಿದೆ.
ಕಡಿಮೆ ಸ್ಟೋರೇಜ್ ಸಾಮರ್ಥ್ಯವಿರುವ ಸ್ಮಾರ್ಟ್ಫೋನ್ಗಳಲ್ಲೂ ಸುಲಲಿತವಾಗಿ ಗೇಮ್ ಆಡಲು ಅನುಕೂಲವಾಗುವಂತೆ ಈ ಲೈಟ್ ಆವೃತ್ತಿಯನ್ನು ಪರಿಚಯಿಸಲಾಗುತ್ತಿದೆ. ಮೂಲ ಬಿಜಿಎಂಐ ಗೇಮ್ನ ಆಕರ್ಷಣೆ ಮತ್ತು ರೋಚಕತೆಯನ್ನು ಉಳಿಸಿಕೊಂಡೇ, ಮೊಬೈಲ್ನಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳುವಂತೆ ‘ಬಿಜಿಎಂಐ ಏರ್’ ಅನ್ನು ವಿನ್ಯಾಸಗೊಳಿಸಲಾಗಿದೆ.
ಗೇಮ್ನ ಪ್ರಮುಖ ಅಂಶಗಳು
ಕಳೆದ ಆಗಸ್ಟ್ 25, 2026 ರಂದು ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗಾಗಿ ಇದರ ಪ್ರಿ-ರಿಜಿಸ್ಟ್ರೇಷನ್ ಆರಂಭಿಸಲಾಗಿತ್ತು. ಈ ಗೇಮ್ನ ಆರಂಭಿಕ ಡೌನ್ಲೋಡ್ ಗಾತ್ರವು ಕೇವಲ ಅಂದಾಜು 1ಜಿಬಿ ಇರಲಿದೆ. ಇದು ಮೊಬೈಲ್ನ ಮೆಮೊರಿ ಉಳಿಸಲು ಸಹಕಾರಿಯಾಗಿದೆ.
ಬಳಕೆದಾರರ ಪ್ರತಿಕ್ರಿಯೆಗಳನ್ನು ಪಡೆದು ಗೇಮ್ ಅನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಶೀಘ್ರದಲ್ಲೇ ‘ಓಪನ್ ಬೀಟಾ’ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಮೂಲ ಬಿಜಿಎಂಐ ಗೇಮ್ ಆಡುತ್ತಿರುವವರು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ‘ಬಿಜಿಎಂಐ ಏರ್’ ಆಡಲು ತಮ್ಮ ಹಳೆಯ ಅಕೌಂಟ್ ಅನ್ನು ಟ್ರಾನ್ಸ್ಫರ್ ಮಾಡುವ ಅಗತ್ಯವಿಲ್ಲ. ಹಳೆಯ ಅಕೌಂಟ್ ಅನ್ನು ಬದಲಾಯಿಸದೆಯೇ, ಸಂಪೂರ್ಣವಾಗಿ ಪ್ರತ್ಯೇಕವಾಗಿ ಈ ಹೊಸ ‘ಬಿಜಿಎಂಐ ಏರ್’ ಗೇಮ್ ಅನ್ನು ಆಡಬಹುದು.
ಗೇಮ್ ಬಿಡುಗಡೆಯ ದಿನಾಂಕ ಮತ್ತು ಮುಂದಿನ ಅಪ್ಡೇಟ್ಗಳನ್ನು ‘ಬಿಜಿಎಂಐ ಏರ್’ನ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಹಾಗೂ ಇತರೆ ಅಧಿಕೃತ ವಾಹಿನಿಗಳ ಮೂಲಕ ಹಂಚಿಕೊಳ್ಳಲಾಗುವುದು ಎಂದು ಕ್ರಾಫ್ಟನ್ ಹೇಳಿದೆ.
ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್, ಜಾಗತಿಕ ಮಟ್ಟದ ಪ್ರಮುಖ ಗೇಮ್ ಡೆವಲಪರ್ ಕಂಪನಿಯಾಗಿದೆ.
ಭಾರತದಲ್ಲಿ ಬಿಜಿಎಂಐ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಕಂಪನಿ, ಈವರೆಗೆ 26 ಕೋಟಿಗೂ ಅಧಿಕ ಡೌನ್ಲೋಡ್ ದಾಖಲಿಸಿದೆ. ಕೇವಲ ಗೇಮ್ ಬಿಡುಗಡೆಗೆ ಸೀಮಿತವಾಗದೆ, 2021 ರಿಂದ ಭಾರತದ ಗೇಮಿಂಗ್, ಇ-ಸ್ಪೋರ್ಟ್ಸ್ ಮತ್ತು ಟೆಕ್ ಸ್ಟಾರ್ಟ್ಅಪ್ಗಳಲ್ಲಿ 250 ಮಿಲಿಯನ್ ಡಾಲರ್ಗೂ ಹೆಚ್ಚು ಹೂಡಿಕೆ ಮಾಡಿದೆ.
ಭಾರತದ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು 6,000 ಕೋಟಿ ರೂ. ಮೊತ್ತದ ‘ಕ್ರಾಫ್ಟನ್ ಇಂಡಿಯಾ ಯುನಿಕಾರ್ನ್ ಗ್ರೋಥ್ ಫಂಡ್’ ಅನ್ನು ಸ್ಥಾಪಿಸಿದೆ. ಅಲ್ಲದೆ, ದೇಶದ ಹೊಸ ಗೇಮ್ ಡೆವಲಪರ್ಗಳಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಲು ಕ್ಯಾಫ್ಟನ್ ಇಂಡಿಯಾ ಗೇಮಿಂಗ್ ಇನ್ಕ್ಯೂಬೇಟರ್ (KIGI) ಕಾರ್ಯಕ್ರಮವನ್ನು ಸಹ ನಡೆಸುತ್ತಿದೆ. ಇತ್ತೀಚೆಗಷ್ಟೇ ಮದ್ರಾಸ್ ಐಐಟಿ ಜೊತೆಗೂಡಿ ಹೊಸ ಪ್ರತಿಭೆಗಳನ್ನು ಬೆಳೆಸಲು ‘ಕಿಜಿ ಅಕಾಡೆಮಿ’ಯನ್ನೂ ಆರಂಭಿಸಿದೆ.





