ಆವತೀಯತೆ ಆರಂಭದ ಮುಂದುವರೆದ ಭಾಗ.. Saakshatv aavathiyathe episode 1 end
ಆವತಿಯನ್ನರಿಗೆ ತೌಳವಲಿಪಿ-ವೈದ್ಯ-ಪಾಕ ಪ್ರಾವಿಣ್ಯ ಕಲಿಸಿಕೊಟ್ಟ ವಿಚಿತ್ರ ಸಾಧಕ ಗುರು ತಿರುಕ ತನ್ನ ಪೋಷಕಿ ಸೂಲಂಗಿಯನ್ನೇ ದ್ವೇಷಿಸುತ್ತಾನೆಯೇ?
ತನ್ನ ಮೊತ್ತ ಮೊದಲ ದಿಗ್ವಿಜಯದಲ್ಲಿ ಸುರಗಿರಿ ಪಾಳೆಯವನ್ನು ದೋಚಿದ ಮಾದನಾಯಕನ ಮುನ್ನೂರು ಮೈಜೆಟ್ಟಿ ಪಡೆಯಲ್ಲಿ, ನೂರಕ್ಕೂ ಮಿಕ್ಕಿ ಸಾವುಗಳಾಗಿದ್ದವು. ಆದರೆ ಸುಮಾರು ಇಪ್ಪತ್ತು ಕಾಡುಕೋಣದ ಗಾಡಿಗಳಷ್ಟು ಭರ್ಜರಿ ಸಂಪತ್ತು ವೀರಮಾದನ ಭಂಡಾರ ಸೇರಿತ್ತು. ಮಾದಾಪುರಕ್ಕೆ ಮರಳುವ ದಾರಿಯಲ್ಲಿ ನಾಲ್ಕನೆಯ ಬೆಟ್ಟ ದಾಟಿ, ಹತ್ತನೆಯ ಹಳ್ಳ ಎದುರಾಗುತ್ತಿದ್ದಂತೆ, ಅರ್ಧದಷ್ಟು ಗಾಡಿಗಳಲ್ಲಿ ಅಷ್ಟೂ ಸಂಪತ್ತನ್ನು ಹೊರೆಸಿದ ಮಾದನಾಯಕ ಅವುಗಳನ್ನು ಅಲ್ಲಿಯೇ ಬಿಟ್ಟು, ತನ್ನ ಪಡೆಯೊಂದಿಗೆ ಉಳಿದ ಕಾಟಿ ಬಂಡಿಗಳನ್ನು ಮುನ್ನಡೆಸಿ ಅಲ್ಲಿಂದ ತೆರಳಿದ. ಅಪಾರ ಸಂಪತ್ತು ವಜ್ರ ವೈಢೂರ್ಯಗಳ ನಿಧಿ ಕಾಟಿ ಗಾಡಿಗಳಲ್ಲಿ ಅರ್ಧ ದಿನ ಪೂರ್ತಿ ಅನಾಥವಾಗಿ ಬಿದ್ದಿತ್ತು. ವೀರಮಾದ ಅದೇಕೆ ಸಂಪತ್ತು ಬಿಟ್ಟು ಹೊರಟ ಅನ್ನುವುದು ಮೈಜೆಟ್ಟಿ ಆಳುಗಳಲ್ಲಿ ಯಾರಿಗೂ ಅರ್ಥವಾಗಲಿಲ್ಲ. ಅಷ್ಟೆಲ್ಲಾ ಕಷ್ಟಪಟ್ಟು, ಬಡಿದಾಡಿ ಸಂಪಾದಿಸಿದ ಸಂಪತ್ತನ್ನು ಹೀಗೆ ಕಾಡಿನ ಮಧ್ಯೆ ಬಿಟ್ಟು ಹೋಗುವುದು ಅವರಿಗೆ ಸ್ವಲ್ಪವೂ ಇಷ್ಟವಿರದ ಸಂಗತಿಯಾಗಿತ್ತು. ಆದರೆ ನಾಯಕನ ನಿರ್ಧಾರಗಳಿಗೆ ಯಾರೂ ಪ್ರತಿಯಾಡುವಂತಿರಲಿಲ್ಲ. ಕೊಂಚ ಅಸಮಧಾನದಿಂದಲೇ ಮುಂದೆ ನಡೆದ ಅವರಲ್ಲಿ, ಹಿಂದೊಂದು ಕಾಲದಲ್ಲಿ ತಮ್ಮ ಜನಕ್ಕೆ ಅನ್ಯಾಯ ಮಾಡಿದ ಪಾಳೆಯಗಾರನ ಸೊಕ್ಕು ಮುರಿದ ತೃಪ್ತಿಯಂತೂ ಇತ್ತು. ಜೊತೆಗೆ ಸುರಗಿರಿಯ ೪೦ ಮಜಬೂತಾದ ಕುದುರೆಗಳು, ೧೦ ಮದ್ದಾನೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
Saakshatv aavathiyathe episode1 end
ಮಾದನಾಯಕನ ಸೈನ್ಯಕ್ಕೆ ಅಶ್ವ ಮತ್ತು ಹಸ್ತಿ ಮೊದಲ ಬಾರಿಗೆ ಸೇರ್ಪಡೆಗೊಂಡಿತ್ತು. ಜಗಜೆಟ್ಟಿ ಸೋಪಯ್ಯ ಮತ್ತು ಸೋಲದೇವನಿಗೆ ಮಾತ್ರ ಮಾದನಾಯಕ ಹೀಗೆ ಏಕೆ ಮಾಡಿದ ಅನ್ನುವುದು ಅರಿವಿತ್ತು. ಸುರಗಿರಿಯಿಂದ ಒತ್ತೆಯಾಳಾಗಿ ನಡೆಸಿಕೊಂಡು ಬಂದಿದ್ದ ಪ್ರಜೆಗಳನ್ನು, ಮೂರನೆಯ ಬಿಟ್ಟವಿಳಿಯುವಷ್ಟರಲ್ಲಾಗಲೇ ವಾಪಾಸು ಕಳಿಸಲಾಗಿತ್ತು. ಯಾರಿಗೂ ಹಾನಿಯುಂಟು ಮಾಡದಂತೆ ಹಿಂದಕ್ಕೆ ಕಳಿಸಿದ ಮಾದನಾಯಕ, ಪೆಂಗಳರಾಯನಿಗೆ ಒಂದು ಎಚ್ಚರಿಕೆಯ ಸಂದೇಶವನ್ನೂ ಕಳಿಸಿದ್ದ. ಮುಂದಿನ ದಾಳಿ ಅವನ ರಾಜ್ಯದ ವಾಯುವ್ಯ ಭಾಗದ ತುದಿಯಲ್ಲಿರುವ ಕೊಂಡಪುರದ ಮೇಲೆ ನಡೆಸುತ್ತೇನೆ, ಸಾಧ್ಯವಾದರೆ ಎದುರಿಸು ಎಂದು ಸೋಲದೇವನ ಮೂಲಕ ಹೇಳಿಸಿದ್ದ. ಕಗ್ಗಾಡಿನ ಮಧ್ಯೆ ಬಿದ್ದಿದ್ದ ಸುರಗಿರಿಯ ಖಜಾನೆಯನ್ನು ಒಂದಷ್ಟು ಕಣ್ಣುಗಳು ಕೊಂಚ ಹೊತ್ತು ಕಾದವು. ನಂತರ ಪೊದೆಯಿಂದ ಒಂದೊಂದಾಗಿ ಹೊರಬಂದಿತು ವೀರಮಾದನ ನಿಷ್ಟ ರಾಕ್ಷಸ ಪಡೆ. ಬಂಡಿಗೆ ಕಟ್ಟಿದ್ದ ಯಮಗಾತ್ರದ ಕಾಟಿಗಳು ಒಂದು ಕ್ಷಣ ಭಯವಿಹ್ವಲತೆಯಿಂದ ಕೊಸರಾಡಿದವು. ಮೊದಲೇ ನಿರ್ದೇಶಿಸಿ ಕಳಿಸಿದಂತೆ ಆ ಸೈಂದವ ಗಾತ್ರದ ರಕ್ಕಸರು ಬಂಡಿಯನ್ನು ಏರಿ ದಕ್ಷಿಣದ ತುತ್ತತುದಿಯ ಕಡಲಂಚಿಗೆ ಒಯ್ದರು. ಅಲ್ಲಿ ಸಾಮಯ್ಯನ ಜೊತೆಗೆ ನಿಂತಿದ್ದ ಅರೆಬೆತ್ತಲೇ ಸಂತ ಗುರು ತಿರುಕ.
ಉಳಿದ ಆವತಿಯನ್ನರು ಆ ದೃಶ್ಯ ನೋಡಿದ್ದರೆ ಎದೆಯೊಡೆದು ಸಾಯುತ್ತಿದ್ದರು. ಅಷ್ಟು ರಣಭೀಕರವಾಗಿ ಭೀಬತ್ಸರಂತೆ ತೋರುತ್ತಿದ್ದರು ಆ ರಾಕ್ಷಸರು. ದ್ವೀಪದ ಮೃಗ ಖಗಗಳ ಹಸಿ ಮಾಂಸ ತಿಂದು ಅವರಲ್ಲಿ ಅಗಾಧವಾದ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿದ್ದವು. ಸುರಗಿರಿಯಲ್ಲಿ ಬರಿಗೈನಲ್ಲಿ ಸೈನಿಕರ ಸಿಗಿದುಹಾಕಿದ್ದರಲ್ಲ, ಅದರ ರಕ್ತದ ಕಲೆಗಳು ಅವರ ದೇಹದಲ್ಲಿ ಒಣಗಿ ಕರೆಗಟ್ಟಿ ಇನ್ನಷ್ಟು ಭೀಕರವಾಗಿ ಕಾಣುತ್ತಿದ್ದರು. ಆ ಪಡೆಯಲ್ಲಿ ಸಾಮಯ್ಯನ ಸ್ವಂತ ತಮ್ಮನೂ ಇದ್ದ; ಎರಡು ವರ್ಷಗಳ ಹಿಂದೆ ತಿರುಕನ ಅಣತಿಯಂತೆ ಮನುಷ್ಯರಿಂದ ರಾಕ್ಷಸತ್ವ ರೂಪ ಧರಿಸಿ ದ್ವೀಪ ಸೇರಿದವನು. ಆದರೆ ಇವತ್ತು ಸಾಮಯ್ಯನಿಗೆ ತನ್ನ ಒಡಹುಟ್ಟಿದವನ ಗುರುತು ಹತ್ತದಷ್ಟು ವಿಚಿತ್ರ ಬದಲಾವಣೆಗಳು ಅವನಲ್ಲಾಗಿದೆ. ಅವನೂ ಸಹ ಅಣ್ಣ ಸಾಮಯ್ಯನನ್ನು ಕಿರುಗಣ್ಣಿನಲ್ಲೂ ನೋಡಲಿಲ್ಲ. ಒಂದೆಡೆ ಆವತಿಯ ಉನ್ನತಿಗಾಗಿ ತಮ್ಮ ನಾಯಕರ ವಿಶೇಷ ನಿಷ್ಟೆಗೆ ಪಾತ್ರನಾದವನು ಎನ್ನುವ ಅಭಿಮಾನ ಇನ್ನೊಂದೆಡೆ ರಕ್ತ ಹಂಚಿಕೊಂಡು ಜನಿಸಿದವನು ತನ್ನ ಕನಿಷ್ಟ ಗುರುತೂ ಹಿಡಿಯದಷ್ಟು ಬದಲಾಗಿದ್ದಾನೆ ಎನ್ನುವ ವೇದನೆ ಸಾಮಯ್ಯನ ಕರುಳು ಹಿಂಡಿತು. ತಿರುಕ ಇದೆಲ್ಲವನ್ನೂ ಗಮನಿಸಿದವನಂತೆ ಮತ್ತು ಸಾಮಯ್ಯನ ಅಂತರಂಗದ ವೇದನೆ ಅರ್ಥಮಾಡಿಕೊಂಡವನಂತೆ ಸಾಮಯ್ಯನ ಕೈ ಹಿಡಿದು ಸಮಾಧಾನಿಸುವಂತೆ ಅಮುಕಿದ. ಕಂಬನಿ ತುಂಬಿಕೊಂಡ ಮುಖದ ಸಾಮಯ್ಯ ತನ್ನ ತೋಳಿನಿಂದ ಕಣ್ಣುಗಳನ್ನು ಒರೆಸಿಕೊಂಡು, ಬಲವಂತವಾಗಿ ನಿರ್ಭಾವುಕ ಮುಖ ತಾಳಿ ನಿಂತ.
ಕಾಟಿ ಬಂಡಿಗಳನ್ನೆಳೆದು ತಂದ ಹತ್ತು ಮಂದಿ ಸೈಂದವ ರಾಕ್ಷಸರು, ಅವುಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ನಿಲ್ಲಿಸಿ, ತಿರುಕನ ಬಳಿ ಬಂದು ಅವನ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸಿದರು. ಸಾಲಾಗಿ ಮಲಗಿ ಭಕ್ತಿ ಪ್ರದರ್ಶಿಸಿದರು. ತಮ್ಮ ಆರಾಧನೆಯ ಪ್ರತೀಕವಾಗಿ ತಿರುಕನ ಬಲಗಾಲಿನ ಹೆಬ್ಬೆರಳಿಗೆ ತಮ್ಮ ಕಣ್ಣುಗಳನ್ನು ತಾಗಿಸಿ ಕೃತಾರ್ಥರಾದರು. ಅವರಲ್ಲಿ ಒಬ್ಬರನ್ನು ಮೇಲೆಬ್ಬಿಸಿ ಆಲಂಗಿಸಿಕೊಂಡ ತಿರುಕ, ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಮೌನದಲ್ಲೇ ಮುಂದೆ ಮಾಡಬೇಕಾಗಿರುವ ಕೆಲಸವನ್ನು ಅಣತಿ ಮಾಡಿದ. ಆದೇಶ ಸಿಕ್ಕವರಂತೆ ಆ ರಾಕ್ಷಸ ಪಡೆ ಕಡಲ ತೀರದಲ್ಲಿದ್ದ ತಾಳೇ ಮರಗಳ ಸಾಲಿನತ್ತ ನಡೆದರು. ಮುಂದಿನ ಕೆಲವು ಗಂಟೆಗಳಲ್ಲಿ ಆ ಮರಗಳನ್ನು ಬುಡಸಹಿತ ಕಿತ್ತು ಹೊತ್ತು ತಂದರು. ತಿರುಕ ಸೂಚಿಸಿದಂತೆ ಒಂದಾಳು ಉದ್ದದ ಹತ್ತಾರು ನಾವೆಗಳನ್ನು ಕಟ್ಟಿದರು. ಸುರಗಿರಿಯಿಂದ ಹೊತ್ತು ತಂದ ಸಂಪತ್ತನ್ನು ಕಾಟಿ ಗಾಡಿಗಳ ಸಹಿತ ದೋಣಿಗೆ ಹೇರಿಕೊಂಡು ದ್ವೀಪಗಳತ್ತ ಸಾಗಿದರು. ಅವರ ದೋಣೆಗಳು ತೀರ ಬಿಟ್ಟು ಕೊಂಚ ದೂರ ಸಾಗಿದೊಡನೆ ಅದೇಕೋ ಸಾಮಯ್ಯನ ತಮ್ಮ ತಿರುಗಿ ನೋಡಿದ, ತಿರುಕನ ಪಕ್ಕದಲ್ಲಿ ನಿರ್ಲಿಪ್ತನಾಗಿ ನಿಂತಿದ್ದ ಸಾಮಯ್ಯನ ಅರಿವಿಗೆ ಇದು ಬಂದಿತಾದರೂ ಅವನ ಮುಖದಲ್ಲಿ ಯಾವ ಭಾವಗಳೂ ವ್ಯಕ್ತವಾಗಲಿಲ್ಲ. ಇದನ್ನು ಮತ್ತೆ ಗಮನಿಸಿದ ತಿರುಕನ ಮುಖದಲ್ಲಿ ನಿರ್ಧಾರವೊಂದು ದೃಢವಾಯಿತು. Saakshatv aavathiyathe episode 1 end
***
ಆವತಿಯಲ್ಲಿ ಎಲ್ಲ ದೈನಂದಿನ ಚಟುವಟಿಕೆಗಳೂ ಸುಸೂತ್ರವಾಗಿ ನಡೆಯುತ್ತಿತ್ತು. ತಿರುಕ ಆವತಿಯನ್ನರಿಗೆ ಹೊಸ ಭಾಷೆ ಕಲಿಸುತ್ತಿದ್ದ. ಇದು ಅವರು ಕಾಡಿನಲ್ಲಿ ಆಡುತ್ತಿದ್ದ ಭಾಷೆಗಿಂತ ಭಿನ್ನವಾಗಿತ್ತು, ರಾಗವಾಗಿತ್ತು ಮತ್ತು ಶಾಸ್ತ್ರೀಯವಾಗಿತ್ತು; ಮುಖ್ಯವಾಗಿ ಈ ಭಾಷೆಗೆ ಲಿಪಿಯಿತ್ತು. ಮಾತಾಡುವ ಜೊತೆಗೆ ಬರೆಯಬಹುದಾಗಿತ್ತು ಮತ್ತು ಓದಲೂ ಸಾಧ್ಯವಾಗುವ ಭಾಷೆ ಇದಾಗಿತ್ತು. ಮಾದನಾಯಕ, ಸೋಲದೇವ, ಸೋಪಯ್ಯ, ಸಾಮಯ್ಯ ಮುಂತಾದವರ ಸಹಿತ ಪ್ರತಿಯೊಬ್ಬ ಆವತಿಯನ್ನರೂ ಈ ಭಾಷೆಯನ್ನು ಕಲಿಯಲೇಬೇಕು ಎಂದು ತಿರುಕ ಬಯಸಿದ್ದ ಮತ್ತು ಮಾದನಾಯಕನ ಮನಸಿನಲ್ಲಿಯೂ ಇದೇ ಆಕಾಂಕ್ಷೆ ಇತ್ತು. ತಾವೀಗ ಕಾಡುಜನರಲ್ಲ ತಾವು ನವನಾಗರೀಕತೆಯನ್ನು ಕಟ್ಟಿಕೊಳ್ಳುತ್ತಿರುವವರು. ಉಳಿದ ಪಾಳೆಯಗಳ ಜನರಂತೆ ತಮ್ಮ ಜನರೂ ಶಿಕ್ಷಣ ಪಡಯಬೇಕು ಎಂದು ಮಾದನಾಯಕ ಬಯಸಿದ್ದ. ಸುರಗಿರಿಯ ಕೋಟೆ ಕೊಳ್ಳೆ ಹೊಡೆದು ಬರುವಾಗಲೇ ಇಂತದ್ದೊಂದು ಆಲೋಚನೆ ಅವನ ಮನಸಿನಲ್ಲಿ ಮೂಡಿತ್ತು.
ಆದರೆ ಮೊದಲ ದಿಗ್ವಿಜಯ ಸಾಧಿಸಿ ರಾಜಧಾನಿ ಮಾದಾಪುರ ಹೊಕ್ಕ ವೀರಮಾದನಿಗೆ ಭವ್ಯ ಸ್ವಾಗತದೊಂದಿಗೆ ಅಚ್ಚರಿಯೂ ಎದುರಾಗಿತ್ತು. ಮಾದ ಏನು ಬಯಸಿದ್ದನೋ ಅದನ್ನು ಕಾರ್ಯಗತಗೊಳಿಸುವ ಕಡೆ ಮೊದಲ ಹೆಜ್ಜೆ ಇಟ್ಟಿದ್ದ ಗುರು ತಿರುಕ. ಮಾದಾಪುರ ಕೋಟೆಯ ಮೊದಲನೆಯ ಸುತ್ತಿನ ಹೊರಭಾಗದಲ್ಲಿ ವಿಶಾಲವಾದ ನಲ್ವತ್ತನಾಲ್ಕು ಅಂಕಣದ ಸಭಾಭವನ ನಿರ್ಮಾಣಗೊಂಡಿತ್ತು. ಅದೇಕೆಂದು ಮಾದನಿಗೆ ಅರ್ಥವಾಗಲಿಲ್ಲ. ಆ ದಿನ ಸಾಯಂಕಾಲ ಸೂಲಂಗಿ ಗುಡಿಗೆ ಹೊರಟಿದ್ದ ಮಾದನಾಯಕನನ್ನು ತಿರುಕ ಹೊಸ ಪಾಠಶಾಲೆಗೆ ಕರೆತಂದು, ಇನ್ನುಮುಂದೆ ತಾನು ಅಧ್ಯಾಪನ ಮಾಡುತ್ತೇನೆಂದುಬಿಟ್ಟ. ಮಾದನಾಯಕನ ಮುಖದಲ್ಲಿ ಮತ್ತೊಂದು ಅಚ್ಚರಿ ಮೂಡಿತ್ತು; ಕಾರಣ ತಿರುಕ ಕಲಿಸಲು ಹೊರಟಿದ್ದ ಹೊಸ ಭಾಷೆಯ ಹೆಸರು ತೌಳವ. ಅದು ಉತ್ತರದ ಸುರಗಿರಿಯ ಪಾಳೆಯಗಾರ ಪೆಂಗಳರಾಯನ ಸೀಮೆಯಲ್ಲಿ ಬಳಕೆಯಲ್ಲಿದ್ದ ಭಾಷೆ ಮತ್ತು ಪೂರ್ವದ ಪಾಳೆಯಗಾರ ಇಜ್ಜಿರನ ಸೀಮೆಯಲ್ಲೂ ತೌಳವ ಮಾತಾಡುತ್ತಿದ್ದರು ಹಾಗೂ ಅದರಾಚೆಗೂ ಕೆಲ ಸೀಮೆಯಲ್ಲಿ, ಒಟ್ಟು ದಕ್ಷಿಣದ ಬಹುತೇಕ ಕಡೆ ತೌಳವ ಭಾಷೆ ರೂಡಿಯಲ್ಲಿತ್ತು. ಪಶ್ಚಿಮದ ಕಾಡುಗಳಲ್ಲಿದ್ದ ಅನೇಕ ಆದಿವಾಸಿ ಬುಡಕಟ್ಟುಗಳು ಅರ್ಥವಾಗದ ಹತ್ತಾರು ಭಾಷೆಗಳನ್ನಾಡುತ್ತಿದ್ದರು. ಉತ್ತರದ ಪ್ರಾಕೃತ ಭಾಷೆಯನ್ನು ಹೊರತುಪಡಿಸಿದರೇ ಪೂರ್ವ ಮತ್ತು ದಕ್ಷಿಣದ ಕಡೆ ತೌಳವ ಭಾಷೆ ಅಷ್ಟಿಷ್ಟು ಮಾರ್ಪಾಡುಕೊಂಡು ರೂಡಿಗತವಾಗಿತ್ತು. ಈ ಎಲ್ಲಾ ಮಾಹಿತಿಗಳು ಆವತಿಯ ಜನಪದದಲ್ಲಿ ತಿರುಕನೊಬ್ಬನಿಗೆ ಮಾತ್ರ ತಿಳಿದಿತ್ತು. Saakshatv aavathiyathe episode 1 end
ಪ್ರಾತಃಕಾಲದಲ್ಲಿ ಮೂಡಣದಲ್ಲಿ ಭಾಸ್ಕರ ಉದಯಿಸುವ ಗಳಿಗೆ ಕೊಂಚ ಹಿಂದೆಮುಂದಾದರೂ ಆಗಬಹುದು ಆದರೆ ತಿರುಕನ ದೈನಂದಿನ ದಿನಚರಿಯಲ್ಲಿ ವ್ಯತ್ಯಾಸ ಕಂಡುಬರಲು ಸಾಧ್ಯವೇ ಇರಲಿಲ್ಲ. ನಸುಕಿನಲ್ಲಿ ಹಕ್ಕಿಗಳ ಕಲರವಕ್ಕೂ ಮೊದಲೇ ಮಾದಾಪುರದ ಹೊರಗಿನ ಹುಣಸೇ ತೋಪಿನಲ್ಲಿ ತಿರುಕನ ಜೋಡುಗಳ ಸಪ್ಪಳ ಕೇಳಿಬರುತ್ತಿತ್ತು. ತನ್ನ ಬಡಕಲು ಹಟ್ಟಿಯಿಂದ ಹೊರಬಿದ್ದವನೇ ಕೋಟೆಯನ್ನು ಸುತ್ತು ಬಳಸಿ, ಪಶ್ಚಿಮ ದಿಕ್ಕಿನಲ್ಲಿರುವ ಇಶಾವತಿ ನದಿ ತೀರಕ್ಕೆ ನಡೆದು, ಪ್ರಾತರ್ವಿಧಿಗಳನ್ನು ಪೂರೈಸಿ ನದಿಯಲ್ಲಿ ಮುಳುಕು ಹಾಕುತ್ತಿದ್ದ ಗುರು ತಿರುಕ, ನದಿಯ ಸೆಳವನ್ನೂ ತಳ್ಳಿ ಈಜುತ್ತಿದ್ದ. ದೇಹಕ್ಕೆ ಆಯಾಸವಾದರೇ ಪದ್ಮಾಸನ ಹಾಕಿಕೊಂಡು ತೇಲುತ್ತಿದ್ದ. ತಿರುಕನ ಜಲಕ್ರೀಡೆ ಮುಗಿಯುವ ಹೊತ್ತಿಗೆ ಪೂರ್ವದಲ್ಲಿ ಸೂರ್ಯನ ಆಗಮನದ ಸೂಚನೆ ಸಿಗುತ್ತಿತ್ತು. ಕೆಂಬಣ್ಣದ ಮೊದಲ ಕಿರಣ ಭುವಿಗೆ ಹಾಯುತ್ತಿದ್ದಂತೆ ದಂಡೆಯಲ್ಲಿ ನಿಂತು ಮೂರು ಬೊಗಸೆ ನೀರು ಉದಯರವಿಗೆ ಅರ್ಘ್ಯೆ. ದಂಡೆಯ ಮರದ ಪೊಟರೆಯಲ್ಲಿ ಮಡಚಿಟ್ಟ ಜಿಂಕೆ ತೊಗಲು ಹಾಸಿ ಸೂರ್ಯನಿಗೆ ಅಭಿಮುಖವಾಗಿ ವಜ್ರಾಸನದಲ್ಲಿ ಕೂರುವ ತಿರುಕ, ತದೇಕಚಿತ್ತದಿಂದ ಬಾನಿಗೇರುವ ರವಿಯನ್ನು ಕಣ್ಣು ಮಿಟುಕಿಸದೇ ನೋಡುತ್ತಾನೆ. ಭೂಮಿಯಿಂದ ಬಾನಿಗೆ ಒಬ್ಬ ಯಕಃಶ್ಚಿತ ಹುಲುಮಾನವ ಕಳಿಸುವ ಸಂದೇಶ ತಲುಪುತ್ತದಾ? ಗೊತ್ತಿಲ್ಲ. ಆದರೆ ತಿರುಕ ಇಡೀ ವಿಶ್ವದ ಸಕಲ ಗೋಚರ-ಅಗೋಚರ ವಿದ್ಯೆಗಳನ್ನು ಕಲಿಯುವ ಸಂಕಲ್ಪ ಹೊತ್ತ ಹಠಯೋಗಿ. ತಿರುಕ ಏಕಾಗ್ರತೆಯನ್ನು ಸಂಪಾದಿಸಿಕೊಳ್ಳುವ ಸಮಯವೇ ಸೂರ್ಯೋದಯದ ಪ್ರಫುಲ್ಲ ಮಹೂರ್ತ.
ತಿರುಕ ದೂರದ ಹಿಮಾಲಯದ ಗವಿಯಲ್ಲಿ ತಪೋನಿರತ ತನ್ನ ಪಂಚ ಗುರುಗಳಿಗೆ ಅಭಿವಾದನೆ ಸಮರ್ಪಿಸುತ್ತಾನೆ. ಧ್ಯಾನಿಸುತ್ತಲೇ, ಬ್ರಹ್ಮಾಂಡದ ಸಕಲ ಜೀವರಾಶಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತಾನೆ. ತಿರುಕನ ಅದಮ್ಯ ಜೀವನೋತ್ಸಾಹ, ಅಪಾರ ಚೈತನ್ಯ ಶಕ್ತಿ ಮತ್ತು ಅಚ್ಚರಿಯ ಕರ್ತೃತ್ವ ಶಕ್ತಿಯ ಮಾಧ್ಯಮವೇ ಸೂರ್ಯ ತ್ರಾಟಕ. ಬೆನ್ನಿಗಂಟಿಕೊಂಡಿರುವ ಖಾಲಿ ಹೊಟ್ಟೆಯನ್ನು ಚಕ್ರಾಕಾರದಲ್ಲಿ ತಿರುಗಿಸುತ್ತಾ, ಅಂಗನ್ಯಾಸ, ಕರನ್ಯಾಸ ಮಾಡುತ್ತಾ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸಿ ಕೇವಲ ಕಣ್ಣಿನಲ್ಲೇ ಅರುಣ ಕಿರಣಗಳನ್ನು ಆಪೋಷನ ಪಡೆದುಕೊಳ್ಳುವಂತೆ ಕೂತಿರುವ ತಿರುಕನನ್ನು ಆ ಸಂದರ್ಭದಲ್ಲಿ ಯಾವ ಮಾನವ ಜೀವಿಯೂ ನೋಡಲು ಸಾಧ್ಯವಿಲ್ಲ. ನೋಡಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣದಿಂದ ಮಾದನಾಯಕ ಮುಂಜಾನೆ ತಿರುಕ ಇಶಾವತಿಯ ಮಗ್ಗುಲಿಂದ ಮೇಲೆದ್ದು ಬರುವತನಕ ಯಾವ ಆವತಿಯನ್ನರೂ ಅತ್ತ ಸುಳಿಯದಂತೆ ಕಟ್ಟಪ್ಪಣೆ ಮಾಡಿದ್ದಾನೆ.
ತನ್ನ ಮುಂಜಾನೆ ತ್ರಾಟಕದ ಕೊನೆಯಲ್ಲಿ ದೀರ್ಘವಾಗಿ ಉಸಿರೆಳೆದುಕೊಂಡು ಕಣ್ಣುಮುಚ್ಚುವ ತಿರುಕ, ದೊಡ್ಡಯ್ಯನ ಕೆರೆ ಹಾಡ್ಯದ ದಕ್ಷಿಣ ದಿಕ್ಕಿನಲ್ಲಿದ್ದ ತನ್ನ ಶಕ್ತಿಸ್ಥಾವರ, ಮಹಾವೃಕ್ಷದ ಚಿತ್ರವನ್ನು ಕಲ್ಪಿಸಿಕೊಂಡು ಕೈ ಮುಗಿಯುತ್ತಾನೆ. ಆ ಎಂಟು ನೂರು ವರ್ಷಗಳ ಹಳೆಯ ಆಲದ ಮರ ಒಂದು ಸಲ ಲವಲವಿಕೆಯಿಂದ ತನ್ನ ಕೊಂಬೆಗಳನ್ನು ಮತ್ತು ವೃದ್ಧ ಬೈರಾಗಿಯ ಗಡ್ಡದಂತಿರುವ ಬಿಳಲುಗಳನ್ನು ಅಲುಗಾಡಿಸಿ ಆಶಿರ್ವದಿಸುತ್ತದೆ. ಮತ್ತೆ ಅವನು ಕಣ್ಣು ತೆರೆದಾಗ ಅವನ ಕಣ್ಣುಗಳಲ್ಲಿ ಎರಡು ಸಂಗತಿಗಳು ನಿಚ್ಚಳವಾಗಿರುತ್ತದೆ. ಒಂದು ಕೇವಲ ಕಣ್ಣಿನಿಂದಲೇ ಅಗ್ನಿವರ್ಷ ಸೃಷ್ಟಿಸಬಹುದಾದ ಬ್ರಹ್ಮತೇಜಸ್ಸು ಮತ್ತು ಎರಡನೆಯದು ಈ ಬದುಕನ್ನು ಇಷ್ಟರಮಟ್ಟಿಗೆ ಕಾಪಿಟ್ಟ ಪ್ರಕೃತಿಗೆ ಸಲ್ಲಿಸುವ ಕಂಬನಿಗಳ ಮಹಾಭಿವಂದನೆ. ಧಾರಾಕಾರವಾಗಿ ಸುರಿವ ಕಣ್ಣೀರಿನ ಸಂಗಡ ಎದ್ದು ನಿಲ್ಲುವ ತಿರುಕ, ದಂಡೆಯಲ್ಲಿ ಇನಿಯ ರವಿಯನ್ನು ಕಂಡು ನಾಚಿ ತಲೆತಗ್ಗಿಸಿ ನಿಂತ ರಥಪುಷ್ಪದ ಗಿಡದ ಕಡೆಗೆ ನೋಡುತ್ತಾನೆ. ಕಣ್ಣಲ್ಲಿ ಏಕಾಗ್ರತೆ ಧಾರೆ ಧಾರೆಯಾಗಿ ಹನಿಕುತ್ತದೆ; ತಿರುಕನ ದೃಷ್ಟಿ ತಾಗುತ್ತಿದ್ದ ಹಾಗೆ ಕೆಂಬಣ್ಣದ ರಥಪುಷ್ಪದ ವರ್ಣ ಹಸಿರಾಗುತ್ತದೆ. ಕೆಂಪು ಕ್ರಾಂತಿಯ ಪ್ರತೀಕ; ಹೋರಾಟದ ದ್ಯೋತಕ. ಆದರೆ ತಿರುಕನಿಗೆ ಸಮೃದ್ಧತೆ ಬೇಕು. ಹಸಿರು ಅದರದ್ದೇ ಸಂಕೇತ. ತಿರುಕನ ಬದುಕಿನ ಕರ್ತವ್ಯವೇ ಶಾಂತಿ ಮತ್ತು ಸಮೃದ್ಧತೆಯ ಸ್ಥಾಪನೆ. Saakshatv aavathiyathe episode 1 end
ಬಹುತೇಕ ಆವತಿಯನ್ನರಿಗೆ ತಿಳಿಯದ ಸಂಗತಿಯೆಂದರೇ ತಿರುಕ ಆರಾಧಿಸುವ ಮಹೋನ್ನತ ದೇವರು ಈ ಸೂರ್ಯ. ಆದರೆ ಯಾವ ಆವತಿಯನ್ನರಿಗೂ ತಿಳಿಯದ ವಿಚಾರವೆಂದರೇ, ತನ್ನ ಪೋಷಕಿ ಸೂಲಂಗಿಯನ್ನು ತಿರುಕ ಶರಂಪರ ದ್ವೇಷಿಸುತ್ತಾನೆ. ನಟ್ಟ ನಡುರಾತ್ರಿಯಲ್ಲಿ ತನ್ನ ಗುಡಿಸಲಿನಲ್ಲಿ ಸೂಲಂಗಿ ಗುಡಿಯಿರುವ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತು ವಾಚಾಮಗೋಚರ ಬಯ್ಯುತ್ತಾನೆ. ಹುಣ್ಣಿಮೆ ಅಮವಾಸ್ಯೆಯ ದಿನಗಳಂದು ನಡೆವ ಆವತಿಯನ್ನರ ಬಟವಾಡೆಯ ಹೊರತಾಗಿ ಮತ್ಯಾವತ್ತೂ ತಿರುಕ ಸೂಲಂಗಿ ಗುಡಿಯ ಕಡೆಗೆ ತಿರುಗಿಯೂ ನೋಡುವುದಿಲ್ಲ. ತಿರುಕ ತನ್ನಮ್ಮ ಸೂಲಂಗಿಗೆ ಕೈ ಮುಗಿಯುವುದಿಲ್ಲ.
***
ತಿರುಕನ ಮುಂಜಾನೆಯ ವ್ಯವಹಾರಗಳು ಮುಗಿಯುತ್ತಿದ್ದ ಹಾಗೇ ಪೂರ್ವದ ಕೋಟೆ ಬಾಗಿಲಿಗೆ ತಾನೇ ಪಳಗಿಸಿದ ಆನೆಯ ಮೇಲೇರಿ ಬರುತ್ತಾನೆ ವೀರ ಮಾದ. ಗುರುಶಿಷ್ಯರು ಕೋಟೆಯ ಬತೇರಿಯ ಮೇಲೆ ಹತ್ತಿ ನಿಂತು, ರಾಜಧಾನಿಯ ಪಟ್ಟಣಗಳನ್ನು ನೋಡುತ್ತಾ ಉಜ್ವಲ ಭವಿತವ್ಯದ ಕನಸು ಕಟ್ಟುತ್ತಾರೆ. ತಿರುಕ ತನ್ನ ಪ್ರಿಯಶಿಷ್ಯನಿಗೆ ರಾಜರಹಸ್ಯ ಬೋಧಿಸುತ್ತಾನೆ, ಆಡಳಿತದ ನೀತಿಗಳನ್ನು ಕಲಿಸುತ್ತಾನೆ, ಆಳುವ ನಾಯಕನಿಗೆ ಇರಬೇಕಾದ ಸೂಕ್ಷ್ಮಗಳನ್ನು ಹೇಳಿಕೊಡುತ್ತಾನೆ. ಮಾದನಾಯಕ ವಿನಮ್ರತೆಯಿಂದ ಇಷ್ಟನ್ನೂ ಕೇಳಿಸಿಕೊಳ್ಳುತ್ತಾನೆ. ನಂತರ ಇಬ್ಬರೂ ಸೇರಿ ಮಾದಾಪುರದ ಬೀದಿಯಲ್ಲಿ ನಡೆದು ಅರಮನೆ ತಲುಪುತ್ತಾರೆ. ಮೈಜೆಟ್ಟಿ ಆಳುಗಳು ನಡುಬಗ್ಗಿಸಿ ನಿಂತು ನಾಯಕನಿಗೆ ಮತ್ತು ಶಿರಸಾಷ್ಟಾಂಗ ಪ್ರಣಾಮ ಮಾಡಿ ತಿರುಕನಿಗೂ ವಂದಿಸುತ್ತಾರೆ.
ಸೂರ್ಯ ಉದಿಸಿ ಎರಡು ಜಾವ ಮುಗಿಸಿ ಬಾನಿನ ಕಾಲುಭಾಗ ಆಕ್ರಮಿಸಿಕೊಳ್ಳುವ ಸಮಯದಲ್ಲಿ ಆವತಿಯ ರಾಜಸಭೆ ಏರ್ಪಡುತ್ತದೆ. ಆವತಿಯ ಪ್ರತಿ ಬೆಳಿಗಿನ ಸಮಯದ ರಾಜಸಭೆಗೆ ಪ್ರತಿಯೊಂದು ಕುಟುಂಬದ ಒಬ್ಬ ಮನುಷ್ಯ ಹಾಜರಿರಲೇ ಬೇಕು. ಇದು ಕಟ್ಟಪ್ಪಣೆ. ಸೋಲದೇವ ಸಭೆಯ ಪ್ರಣಾಳಿಕೆ ಉದ್ಘೋಷಿಸುತ್ತಾನೆ. ಮಾದನಾಯಕ ತೀರ್ಮಾನಗಳನ್ನು ಪ್ರಚುರಪಡಿಸುತ್ತಾನೆ. ತೀರ್ಪುಗಳಿದ್ದರೇ ತಿರುಕನ ಗಮನಕ್ಕೆ ತಂದು ಅಂತಿಮಗೊಳಿಸಲಾಗುತ್ತದೆ. ಆವತಿಯಲ್ಲಿ ಯಾವುದೇ ತಪ್ಪನ್ನೂ ಅಪರಾಧವೆಂದೇ ಪರಿಗಣಿಸಲಾಗುತ್ತದೆ; ಕಠಿಣಾತಿಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಪಶ್ಚಾತ್ತಾಪ ಪಡುವ ಅಪರಾಧಿಗಳನ್ನು ತಿರುಕ ಗುರುತಿಸಿ ಸಂತೈಸುತ್ತಾನೆ. ತಿರುಕನಿನ ಆವತಿಯನ್ನರ ಮನಸಿನಲ್ಲಿ ಮಥಿಸುವ ವಿಚಾರಗಳು ಅರ್ಥವಾಗುತ್ತವೆ. ಶಿಕ್ಷೆ ಬೋಧನೆ ಮತ್ತು ಕ್ಷಮಾದಾನ ಎರಡು ಮಾದನಾಯಕನ ನಿಯಂತ್ರಣದಲ್ಲಿಲ್ಲ. ತಿರುಕ ಹೇಳಿದ್ದೇ ಅಂತಿಮ. ಉಳಿದ ಯಾವ ಆಡಳಿತಕ್ಕೆ ಸಂಬಂದಪಟ್ಟ ವಿಚಾರಗಳಿಗೂ ತಿರುಕ ತಲೆಹಾಕುವುದಿಲ್ಲ.
ಸಭೆ ಮುಗಿಯುತ್ತಿದ್ದ ಹಾಗೇ ಪಾಕಶಾಲೆಗೆ ತೆರಳುವ ತಿರುಕ ಆವತಿಯ ಆಸಕ್ತ ಹೆಂಗಸರಿಗೆ ವಿಶೇಷ ತಿನಿಸು ತಯಾರಿಸುವ ಕಲೆ ಹೇಳಿಕೊಡುತ್ತಾನೆ. ಮಾದನಾಯಕ ಆನೆ ಬಯಲಿಗೆ ನಡೆದು ಕಸರತ್ತು ಮಾಡುತ್ತಾನೆ. ಇಲ್ಲವೇ ವ್ಯವಸಾಯ ಮತ್ತಿತರೆ ಕಸುಬುಗಳ ನಿಗಾ ನೋಡಿಕೊಳ್ಳುತ್ತಾನೆ. ಮಧ್ಯೆ ಬಿಡುವು ಮಾಡಿಕೊಂಡು ಕಾಟಿಗಳ ಕೂಡಿಟ್ಟ ಕೊಟ್ಟಿಗೆಗೆ ನಡೆದು ಅವುಗಳ ಜೊತೆ ಮೈ ದಣಿಯುವಂತೆ ಆಡಿಸಿ ಪಳಗಿಸುತ್ತಾನೆ. ಆವತಿಯನ್ನರು ಕೃಷಿ ಮತ್ತಿತರೆ ಕಸುಬುಗಳಲ್ಲಿ ಮುಳುಗುತ್ತಾರೆ. ವಾರದಲ್ಲಿ ಎರಡು ಮೂರು ಬಾರಿ ಕಡವೆ-ಕಾನುಕುರಿಗಳ ಕೂಗಿ ಕರೆದು ಹಾಲು ಹಿಂಡುತ್ತಾರೆ; ಈ ಕಾನುಕುರಿ-ಕಡಗಳ ಹಾಲು ತಿರುಕನ ವೈದ್ಯಶಾಸ್ತ್ರಕ್ಕೆ ಅತ್ಯಂತ ಅಗತ್ಯ. ಕಾಡೆಮ್ಮೆಯ ಕ್ಷೀರಧಾರೆಯಿಂದ ಆವತಿಯ ಗುಡಿಸಲುಗಳಲ್ಲಿ ಸಮೃದ್ಧತೆ ಮನೆ ಮಾಡಿದೆ.
ಮಧ್ಯಾಹ್ನ ಉಂಡ ನಂತರ ತಿರುಕ ಆಯ್ದ ಕೆಲವು ಆವತಿಯನ್ನರಿಗೆ ಪ್ರಾಚೀನ ವೈದ್ಯ ಹೇಳಿಕೊಡುತ್ತಾನೆ. ನೂರಾರು ತರಹದ ಗಿಡಮೂಲಿಕೆಗಳ ಲೇಹ, ಪುಡಿ, ಕಷಾಯ, ಗುಳಿಗೆಗಳ ತಯಾರಿಕೆ ಕಲಿಸುತ್ತಾನೆ. ಪ್ರತಿಯೊಂದು ಗಿಡ,ಮರ, ಬಳ್ಳಿ, ಎಲೆ, ಕಾಂಡ, ತೊಗಟೆಗಳ ಔಷದೀಯ ಗುಣಗಳು, ಮಹತ್ವ ಮತ್ತು ಹೇಗೆ ದೇಹದ ರೋಗಗಳಿಗೆ ಅವುಗಳು ಮದ್ದಾಗುತ್ತವೆ ಎನ್ನುವುದನ್ನು ವಿವರವಾಗಿ ಬೋಧಿಸುತ್ತಾನೆ. ಸಂಜೆಯ ಸಮಯದಲ್ಲಿ ಮಾದಾಪುರದ ಮೊದಲ ಸುತ್ತಿನ ಕೋಟೆಯ ಹೊರಗೆ ನಿರ್ಮಾಣವಾಗಿರುವ ವಿಶಾಲ ಪಾಠಶಾಲೆಯಲ್ಲಿ ತಿರುಕ ಆವತಿಯನ್ನರಿಗೆ ತಂಡ ತಂಡವಾಗಿ ಪಾಠ ಪ್ರವಚನ ಮಾಡುತ್ತಾನೆ. ತೌಳವ ಲಿಪಿಯನ್ನು ಕೈಹಿಡಿದು ತಿದ್ದುತ್ತಾನೆ. ಆ ಶಾಲೆಯಲ್ಲಿ ನಾಯಕನಾದರೂ ವೀರಮಾದ ನಿಷ್ಟೆಯ ವಿದ್ಯಾರ್ಥಿಯಂತೆ ಕುಳಿತು ತನ್ಮಯತೆಯಿಂದ ಪಾಠ ಆಲಿಸುತ್ತಾನೆ. ಕತ್ತಲು ಕವಿಯುತ್ತಿದ್ದ ಹಾಗೇ ಮತ್ತೆ ಇಶಾವತಿ ನದಿ ದಂಡೆಗೆ ಹೋಗುವ ತಿರುಕ ಸುಮ್ಮನೆ ಕುಳಿತು ನದಿಯನ್ನು ನೋಡುತ್ತಾನೆ. ತಿರುಕ ಬಹುವಾಗಿ ಪ್ರೀತಿಸುವ ಕೆಲವೇ ಸಂಗತಿಗಳಲ್ಲಿ ಇಶಾವತಿಯೂ ಒಂದು. ಅದು ಕೇವಲ ದುಮ್ಮಿಕ್ಕಿ ಹರಿವ ತೊರೆಯಲ್ಲ; ವಯ್ಯಾರದ ವಾಹಿನಿ ಇಶಾವತಿ ತಿರುಕನ ಪ್ರೇಯಸಿ. ತನ್ನ ಮನಸಿನ ಯಾರಿಗೂ ಹೇಳಲಾಗದ ಸಂಗತಿಗಳನ್ನೂ ತಿರುಕ ಇಶಾವತಿಯ ಬಳಿ ಹೇಳಿಕೊಳ್ಳುತ್ತಾನೆ. ಅದು ಆಲಿಸಿದೆ ಎಂಬಂತೆ ತೂಗಿ ಅಲೆಯೇರಿಸಿ ಇಳಿಸಿ ಹರಿಯುತ್ತದೆ. ಕೆಲವೊಮ್ಮೆ ತಿರುಕನ ಮಾತು ಕೇಳಿ ನಕ್ಕಂತೆ ಅಬ್ಬರ ಮಾಡುತ್ತದೆ.
ಸುಮಾರು ಒಂದು ಸಾವಿರ ವರ್ಷದ ಹಿಂದಿನ ಆವತೀಯತೆ ನಾಗರೀಕತೆ ಹೀಗೆ ಹುಟ್ಟಿಕೊಂಡು, ಕಾಡಿನ ಮೂಲದಿಂದ ನಡೆದು ಬೋಳುಬೆಟ್ಟಕೆ ಕಾಲಿಟ್ಟು ನಾಡು ಕಟ್ಟಿಕೊಳ್ಳುತ್ತಿದೆ. ಅದೀಕ ಕಲ್ಲುಕುರುಬರ ಹಾಡಿಗಳ ಒರಟು ಸಂಸ್ಕೃತಿಯಲ್ಲ. ಅಲ್ಲೀಗ ಜ್ಞಾನ ಪ್ರಸರಣೆಯಾಗುತ್ತಿದೆ. ತಿರುಕ ಸೂಚಿಸಿದ ಹಾಗೆಯೇ ಜಗಜೆಟ್ಟಿ ಸೋಪಯ್ಯ ಆವತಿ ಸೈನ್ಯದ ಸೇನಾಪ್ರಮುಖನಾಗಿಯೂ, ಹಿರಿಯ ಸಾತ್ವಿಕ ಸಜ್ಜನ ಸಾಮಯ್ಯ ಮಂತ್ರಿಯಾಗಿಯೂ ಆವತಿ ಸಾಮ್ರಾಜ್ಯದಲ್ಲಿ ಕರ್ತವ್ಯನಿರತರಾಗಿದ್ದಾರೆ. ಅವರಿಬ್ಬರಿಗೂ ವಿಶೇಷ ಕರಿಕಲ್ಲಿನ ಭವ್ಯ ಮಹಲು ಕಟ್ಟಿಕೊಡುವಂತೆ ತಿರುಕ ಮಾದನಾಯಕನಿಗೆ ಸೂಚಿಸಿದ್ದಾನೆ. ಮಾದನಾಯಕನ ತಮ್ಮ ಸೋಲದೇವ ಈಗೀಗ ಆಡಳಿತದ ಹೊಸ ಸೂತ್ರಗಳನ್ನು ತಿರುಕನಿಂದ ಕಲಿತು ಪಕ್ವಗೊಳ್ಳುತ್ತಿದ್ದಾನೆ.
ಈ ಏಳು ಸಂವತ್ಸರಗಳಲ್ಲಿ ಆವತಿ ಸಾಮ್ರಾಜ್ಯದ ಸಂಸ್ಥಾಪಕ ವೀರಮಾದ, ರಾಜಧಾನಿ ಮಾದಾಪುರ ಹೊರತುಪಡಿಸಿ ಹತ್ತಾರು ಹಳ್ಳಿಗಳನ್ನು ನಿರ್ಮಿಸಿದ್ದಾನೆ. ದಕ್ಷಿಣದ ತುತ್ತತುದಿಯಲ್ಲಿ ಗುತ್ತಿಬಾಗಿಲ ಕಡಲ ತಡಿಯಲ್ಲಿಯೂ ಅವನ ವಸಾಹತು ನೆಲೆಗೊಂಡಿದೆ. ಮೂರು ಪ್ರಮುಖ ಉಪರಾಜಧಾನಿಗಳಾಗಿದೆ. ಸುರಗಿರಿ ಪಾಳೆಯದಿಂದ ಆರಂಭವಾಗಿ ಸಾಲು ಸಾಲಾಗಿ ಹನ್ನೊಂದು ಯಶಸ್ವಿ ದಿಗ್ವಿಜಯಗಳನ್ನು ಸಾಧಿಸಿದ್ದಾನೆ. ಕೊಂಡಪುರ, ಪೆನುಗಿರಿ, ಶ್ರಾವಲ್ಲಿ, ಉಪಜನ್ಯ, ಮಹಿರಾವತಿ, ಕರಾಟಿ, ಗೋದಾ, ಮತ್ತು ಬನಗಿರಿ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿ ಜಯಪಡೆದುಕೊಂಡಿದ್ದಾನೆ. ಮಾದನಾಯಕನ ಗೆಲುವಿನ ಕಥೆಗಳು ರಸವತ್ತಾಗಿ ಆವತಿಯನ್ನರು ತಮ್ಮ ಮಕ್ಕಳಿಗೆ ವರ್ಣಿಸುತ್ತಾರೆ. ಆದರೆ ಆವತಿ ಸಾಮ್ರಾಜ್ಯದ ಸುತ್ತಮುತ್ತಲಿನ ಮೂರು ದಿಕ್ಕುಗಳಲ್ಲಿ ಮಾದನಾಯಕನ ಸಂಸ್ಥಾನದ ಆಕ್ರಮಣಗಳಿಗೆ ತುತ್ತಾದ ಪಾಳೆಯಗಾರರು ಸಮಯ ಕಾಯುತ್ತಿದ್ದಾರೆ. ಮಾದನಾಯಕನ ಸಾಮ್ರಾಜ್ಯವನ್ನು ನಿರ್ನಾಮ ಮಾಡಲು ಪಣತೊಟ್ಟಿದ್ದಾರೆ. Saakshatv aavathiyathe episode 1 end
ಇಷ್ಟೆಲ್ಲಾ ಘಟಿಸಿರುವ ಏಳು ಮಳೆಗಾಲದಲ್ಲಿ ಮಂತ್ರಿ ಸಾಮಯ್ಯನ ಮಗಳು ಮಧುವಂತಿಯನ್ನು ಮೊದಲನೆಯ ಹೆಂಡತಿಯಾಗಿಯೂ ಮತ್ತು ಜಗಜೆಟ್ಟಿ ಸೋಪಯ್ಯನ ಪುತ್ರಿ ಕಲಾವಂತಿಯನ್ನು ಎರಡನೇ ಪತ್ನಿಯನ್ನಾಗಿಯೂ ಸ್ವೀಕರಿಸಿದ್ದಾನೆ ವೀರಮಾದ. ಮಹಾರಾಣಿ ಮಧುವಂತಿ ಮತ್ತು ಕಲಾವಂತಿಯರಿಬ್ಬರು ಆವತಿಯನ್ನರ ಪಾಲಿಗೆ ಹಿರಿಯಬ್ಬೆ ಮತ್ತು ಕಿರಿಯಬ್ಬೆ. ಮಧುವಂತಿಗೆ ಮೂವರು ಮಕ್ಕಳಾಗಿವೆ ಮತ್ತು ಕಲಾವಂತಿಗೆ ಇಬ್ಬರು ಮಕ್ಕಳಿದ್ದಾರೆ. ಸಂಸಾರದ ಹರ್ಷ ಸಾಗರದಲ್ಲಿ ಮಾದನಾಯಕ ತೇಲುತ್ತಾ, ಮುಳುಗುತ್ತಾ, ಈಜುತ್ತಾ ಸುಖದಿಂದಿದ್ದಾನೆ, ಆದರೆ ಆಡಳಿತ ಹಳಿ ತಪ್ಪದಂತೆ ನಿಗಾ ನೋಡಲು ತಿರುಕನ ಹದ್ದಿನ ಕಣ್ಣುಗಳು ಮಾದನ ಮೇಲಿವೆ.
ತಮ್ಮ ಮೂಲ ನೆಲೆ ದೊಡ್ಡಯ್ಯನ ಕೆರೆ ಹಾಡ್ಯ ತೊರೆದು ಮಾದಾಪುರ ನಗರ ನಿರ್ಮಿಸಿಕೊಂಡು ಏಳು ಮಳೆಗಾಲ ಕಳೆದ ನಂತರ, ಆವತಿಯನ್ನರು ಹೊಸ ಆಚಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ; ಹೊಸ ಪರಂಪರೆಗಳನ್ನು ಆಲಂಗಿಸಿಕೊಂಡಿದ್ದಾರೆ. ತಮ್ಮ ಮೂಲದೇವಿ ಸೂಲಂಗಿಯ ಅಮೂರ್ತ ಶಕ್ತಿಗೊಂದು ರೂಪ ಕೊಟ್ಟಿದ್ದಾರೆ. ಆವತಿಯನ್ನರ ಆದ್ಯ ಗುರು ತಿರುಕ ಕಲ್ಪಿಸಿರುವಂತೆ, ದೈತ್ಯ ಮೊಸಳೆಯ ಮೇಲೆ ಪದ್ಮಾಸನ ಧರಿಸಿ ಕುಳಿತ ಆಯುಧದಾರಿ ಸೂಲಂಗಿಯ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ತಿರುಕ ಸೂಲಂಗಿಯ ಭಜನೆ ಹೇಳಿಕೊಟ್ಟಿದ್ದಾನೆ.
“ಅಗ್ನಿಕುಂಡದ ಶಾಖ ದಹಿಸಿ, ಕುದಿವ ಪಾಕದ ಉದರದಿಂದ
ಉರಿವ ಜ್ವಾಲೆಯ ಕಾಂತಿ ಹೊತ್ತ, ಸುಡುವ ಜೋಡಿ ನೇತ್ರ ದೊಂದಿ
ಇಳೆಗೆ ಇಳಿದಳು ತಾಯಿ; ಮಮತೆ ತುಂಬಿದ ಆಯಿ
ಶರಣು ಎಂಬೆವು ಅಂಬೆ
ಶರಣು “ಸೂಲಂಗಿʼಯಂಬೆ..”
ಕಿರುಬೆರಳ ಮಡಚಿ-ತೋಳನೆತ್ತಿ; ಬ್ರಹ್ಮಾಂಡ ಭಾರವ ಕರದಿ ಪಿಡಿದು
ನದಿಯ ಮೇಲೆ, ಗಿರಿಯ ಮೇಲೆ, ಮರದ ಮೇಲೆ, ಕಣಿವೆ ಮೇಲೆ
ಹೆಜ್ಜೆಯಿಟ್ಟಳು ಅಡವಿ ಮನೆಗೆ; ಮಕ್ಕಳಿರುವ ಹಾಡ್ಯದೆಡೆಗೆ
ಹೊಳೆವ ಪ್ರಭೆಯ ಧರಿಸಿದವಳೇ; ಕರುಣೆ ಮಳೆಯ ಸುರಿಸುವವಳೇ
ಶರಣು ಎಂಬೆವು ಅಂಬೆ
ಶರಣು “ಸೂಲಂಗಿʼಯಂಬೆ..”
ಮೊಸಳೆ ವಾಹನ ಹತ್ತಿ ಕುಳಿತೆ; ಗಂಗೆ ಮಡಿಲ ತೇಲಿ ಬಂದೆ
ಬಳಲಿ ಬಿದ್ದ ಜೀವ ಕೋಟಿಗೆ; ಬೊಗಸೆ ಚಾಚಿ ಅಮೃತವೆರೆದೆ
ಕತ್ತು ತಿರುಗಿಸಿ, ಕಣ್ಣು ಹಾಯಿಸಿ, ಹಸಿರ ಪತ್ತಲ ಹೊಳೆಯ ಹರಿಸಿ
ಹಾದು ಬಂದಳು ಹಾಡ್ಯದೊಳಗೆ, ನೋವು ನಲಿವಿನ ಋತುವ ಸೃಷ್ಟಿಸಿ
ಶರಣು ಎಂಬೆವು ಅಂಬೆ
ಶರಣು “ಸೂಲಂಗಿʼಯಂಬೆ..”
ಮಂತ್ರ-ತಂತ್ರವ ಪಠಿಸಲಾರೆವು, ಮುದ್ರೆ-ಯಂತ್ರವ ತಿಳಿಯಲಾರೆವು
ನಿನ್ನ ಒಕ್ಕಲು ಸರ್ವರೂ; ನಿನ್ನ ಅಣತಿಯ ಮೀರೆವು
ಮರಣಿಸುವವರೆಗೂ ನಿನ್ನ ಸ್ಮರಣೆಯ ಭಾಗ್ಯವೆಮಗೆ ಕರುಣಿಸು
ಶರಣು ಎಂಬೆವು ಅಂಬೆ
ಶರಣು “ಸೂಲಂಗಿʼಯಂಬೆ..”
-(ಮುಂದಿನ ಸಂಚಿಕೆಯಿಂದ ತೆರೆದುಕೊಳ್ಳಲಿದೆ ಆವತೀಯತೆ ಜನಪದ ಕಥನ)
#ವಿಪ್ರಭಾ
#ಆವತೀಯತೆ