ನವದೆಹಲಿ : ಬಂಡಾಯದ ಬಾವುಟ ಹಾರಿಸಿ ಈಗಾಗಲೇ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ರೆಬಲ್ ನಾಯಕ ಸಚಿನ್ ಪೈಲಟ್, ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನ ಅಧಿವೇಶನಕ್ಕೆ ಇನ್ನು ಕೇವಲ ನಾಲ್ಕೇ ದಿನ ಬಾಕಿ ಇದ್ದು, ಈ ಸಮಯದಲ್ಲಿ ಸಚಿನ್ ಪೈಲಟ್, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಮಧ್ಯಾಹ್ನ ಸಚಿನ್ ಪೈಲಟ್ ಅವರು, ದೆಹಲಿಯಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಆಗಮಿಸಿ ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ತಾವು ಕಾಂಗ್ರೆಸ್ ಗೆ ವಾಪಸ್ ಆಗುವ ಮತ್ತು ತಮ್ಮ ಬೆಂಬಲಿಗ ಶಾಸಕರ ಸ್ಥಾನಮಾನದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಗೆಹ್ಲೂಟ್ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಸಿಎಂ ವಿರುದ್ಧ ಸಿಡಿದು ಬಂಡಾಯದ ಬಾವುಟ ಹಾರಿಸಿದ್ದರು. ಹೀಗಾಗಿ ಆ ಸ್ಥಾನದಿಂದ ಸಚಿನ್ ಅವರನ್ನು ಕೆಳಗಿಳಿಸಲಾಗಿತ್ತು. ಅಲ್ಲದೆ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು.








