ಮಳೆ ಹನಿಗಳ ನಡುವೆ ಕ್ರಿಕೆಟ್ ದೇವ್ರ ಲೀಲೆ…!
ಸಚಿನ್ ತೆಂಡುಲ್ಕರ್… ಕ್ರಿಕೆಟ್ ಬದುಕಿಗಾಗಿ ತನ್ನ ಬಾಲ್ಯದ ತುಂಟಾಟಗಳನ್ನು ತ್ಯಾಗ ಮಾಡಿದ್ದರು. ಸ್ನೇಹಿತರ ಜೊತೆ ಕಾಲ ಕಳೆಯಲಿಲ್ಲ. ಬದಲಾಗಿ ಕಾಲ ಕಳೆದದ್ದು ಮೈದಾನದಲ್ಲಿ. ಗುರು ಅಚ್ರೆಕರ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಟದ ಗ್ರಾಮರ್‍ಗಳನ್ನು ಕಲಿಯುತ್ತಿದ್ದರು. ನಂತರ ಶಾಲೆ, ಶಾಲಾ ಮಟ್ಟದ ಟೂರ್ನಿಗಳು.. ಆ ನಂತರ ಸುಸ್ತಾಗಿ ಮನೆಗೆ ಬರುತ್ತಿದ್ದರು. ಹೀಗಾಗಿ ಸಚಿನ್ ತನ್ನ ಬಾಲ್ಯದ ದಿನಗಳನ್ನು ಬಹುಪಾಲು ಕ್ರಿಕೆಟ್‍ಗಾಗಿಯೇ ಮುಡುಪಾಗಿಟ್ಟಿದ್ದರು.
ನಂತರ ನಡೆದಿರುವುದೆಲ್ಲಾ ಇತಿಹಾಸ. 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಅಳಿದ್ದ ಸಚಿನ್ ಕಳೆದ ಏಳು ವರ್ಷದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ವಿದಾಯದ ಬಳಿಕ ತನ್ನ ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು. ಈ ನಡುವೆ, ಕ್ರಿಕೆಟ್ ಕಾಮೆಂಟರಿ, ಚಾರಿಟಿ ಕೆಲಸ ಹಾಗೂ
ಕ್ರಿಕೆಟ್ ಅಕಾಡೆಮಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಇದೀಗ ಲಾಕ್ ಡೌನ್ ಟೈಮ್. ಸಚಿನ್ ಮನೆಯಲ್ಲೇ ಇದ್ದಾರೆ. ಲಾಕ್ ಡೌನ್ ಟೈಮ್ ನಲ್ಲಿ ತನ್ನ ಕ್ರಿಕೆಟ್ ಬದುಕಿನ ಕೆಲವೊಂದು ಘಟನೆಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹೇಳಿಕೊಂಡಿದ್ದಾರೆ. ಹಾಗೇ ಮಗಳು ಸಾರಾ ಜೊತೆ ಅಡುಗೆ, ಮಗ ಅರ್ಜುನ್ ತೆಂಡುಲ್ಕರ್ ಹೇರ್ ಕಟ್ಟಿಂಗ್ ಅಂತ ಆಗಾಗ ಸುದ್ದಿಯಲ್ಲಿರುತ್ತಿದ್ದರು.
ಇದೀಗ ಸಚಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆದ್ರೆ ಈ ಮಳೆಯನ್ನು ಸಚಿನ್ ಮನೆಯ ಆವರಣದಲ್ಲಿ ಆಸ್ವಾದಿಸುತ್ತಿದ್ದಾರೆ. ಮಳೆ ಹನಿಗಳ ನಡುವೆ ಸಚಿನ್ ಲೀಲೆ… ಒಂದು ಕ್ಷಣ ಸಚಿನ್ ತನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮನೆಯ ಆವರಣದಲ್ಲಿ ಕೆಲವೊಂದು ಎಲೆಗಳನ್ನು ಮತ್ತು ಹೂಗಳನ್ನು ಸಚಿನ್ ಸಂಗ್ರಹಿಸಿದ್ದರು. ಆಗಸದತ್ತ ನೋಡಿ ಮಳೆ ಹನಿಗಳ ಜೊತೆ ಚೆಲ್ಲಾಟವಾಡುತ್ತಿದ್ದರು.
ಮಳೆ ಹನಿಗಳು ನನ್ನನ್ನು ಯಾವಾಗಲೂ ಬಾಲ್ಯದ ದಿನಗಳಿಗೆ ಜಾರಿಕೊಳ್ಳುವಂತೆ ಮಾಡುತ್ತೆ. ಮಳೆ ಹನಿಗಳ ನಡುವೆ ಆಟ ಆಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿರುವುದು ನನ್ನ ಫೆವರೇಟ್ ಕ್ಯಾಮರಾ ವುಮನ್ ಸಾರಾ ತೆಂಡುಲ್ಕರ್ ಅಂತ ಸಚಿನ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.








