`ಸೆಂಚುರಿ ಸ್ಟಾರ್ ಸಚಿನ್’ ಮೊದಲ ಟೆಸ್ಟ್ ಶತಕಕ್ಕೆ 31ರ ಪ್ರಾಯ
31 ವರ್ಷಗಳ ಹಿಂದೆ… ಆಗಸ್ಟ್ 14… ಮ್ಯಾಂಚೆಸ್ಟರ್ ಓಲ್ಡ್ ಟ್ರಾಫೆÇರ್ಡ್ ಮೈದಾನದಲ್ಲಿ ಆಗಿದ್ದೆನು ?
ಆಗಸ್ಟ್ 14ರಂದು ಬಿಸಿಸಿಐ ಆ ಆಟಗಾರನನ್ನು ನೆನಪು ಮಾಡಿಕೊಂಡಿರುವುದು ಯಾಕೆ ?
ಇಂಗ್ಲೆಂಡ್ ಬೌಲರ್ಗಳನ್ನು ಬೆವರಿಳಿಸಿದ ಆ ಮೀಸೆ ಚಿಗುರದ ಹುಡುಗ ಯಾರು ?
7ನೇ ವಿಕೆಟ್ಗೆ ಮನೋಜ್ ಪ್ರಭಾಕರ್ ಜೊತೆ ಅಜೇಯ ಶತಕದ ಜೊತೆಯಾಟವಾಡಿದ್ದು ಯಾರು ?
ಸರಿಯಾಗಿ 31 ವರ್ಷಗಳ ಹಿಂದೆ… ಇದೇ ದಿನ… ಅಂದ್ರೆ ಆಗಸ್ಟ್ 14, 1990. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೆÇರ್ಡ್ ಅಂಗಣ. ಆಗ ಭಾರತದ ಚೋಟಾ ಮಾಸ್ಟರ್ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದರು.
17ರ ಹರೆಯದ ಸಚಿನ್ ತೆಂಡುಲ್ಕರ್ ಆ ಪಂದ್ಯದಲ್ಲಿ ಆಕರ್ಷಕ ಅಜೇಯ 119 ರನ್ ದಾಖಲಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದ್ದ ಸಚಿನ್ ಬ್ಯಾಟಿಂಗ್ ವೈಖರಿಯೂ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. 225 ನಿಮಿಷಗಳ ಕಾಲ ಮೈದಾನದಲ್ಲಿ 189 ಎಸೆತಗಳನ್ನು ಎದುರಿಸಿ 17 ಬೌಂಡರಿಗಳನ್ನು ಸಿಡಿಸಿದ್ದರು. ಸಚಿನ್ ಅವರ ಈ ಅದ್ಭುತ ಇನಿಂಗ್ಸ್ ಅನ್ನು ಬಿಸಿಸಿಐ ಇಂದು ನೆನಪು ಮಾಡಿಕೊಂಡು ಸಚಿನ್ ಆಟವನ್ನು ಗುಣಗಾನ ಮಾಡಿದೆ.
ಅಂದ ಹಾಗೇ ಈ ಪಂದ್ಯದಲ್ಲಿ ಒಟ್ಟು ಐದು ಶತಕಗಳು ದಾಖಲಾಗಿದ್ದವು. ಇಂಗ್ಲೆಂಡ್ ತಂಡದ ಪರ ಗ್ರಹಾಂ ಗೂಚ್ (116) ಮತ್ತು ಮೈಕ್ ಅರ್ಥಟನ್ (131) ಶತಕ ದಾಖಲಿಸಿ ಮೊದಲ ಇನಿಂಗ್ಸ್ ನಲ್ಲಿ 519 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಭಾರತ 432 ರನ್ ಗಳಿಸಿ 87 ರನ್ ಗಳ ಹಿನ್ನಡೆ ಅನುಭವಿಸಿತ್ತು. ಆದ್ರೆ ಈ ಇನಿಂಗ್ಸ್ ನಲ್ಲಿ ನಾಯಕ ಮಹಮ್ಮದ್ ಅಜರುದ್ದೀನ್ ಮನಮೋಹಕ 179 ರನ್ ಸಿಡಿಸಿದ್ದರು.
87 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಆಲನ್ ಲ್ಯಾಂಬ್ (109) ಶತಕದ ಸಹಾಯದಿಂದ 4 ವಿಕೆಟ್ ಕಳೆದುಕೊಂಡು 320 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಗೆಲ್ಲಲು 408 ರನ್ಗಳ ಸವಾಲನ್ನು ಬೆನ್ನಟ್ಟಿದ್ದ ಭಾರತ 6 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದಾಗ ಪಂದ್ಯ ಡ್ರಾ ಮಾಡಿಕೊಳ್ಳಲು ಉಭಯ ತಂಡಗಳು ಒಪ್ಪಿಕೊಂಡಿದ್ದವು.
ಸಚಿನ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತನ್ನ 16ರ ಹರೆಯದಲ್ಲಿ ಪದಾರ್ಪಣೆ ಮಾಡಿದ್ದರು. ಈ ಶತಕದ ಬಳಿಕ ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 50 ಶತಕ ದಾಖಲಿದ್ದರು. ಒಟ್ಟು 51 ಟೆಸ್ಟ್ ಹಾಗೂ 49 ಏಕದಿನ ಶತಕಗಳನ್ನು ದಾಖಲಿಸಿ ವಿಶ್ವದಾಖಲೆ ನಿರ್ಮಿಸಿ 2013ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸಚಿನ್ ಅವರ ಏಕದಿನ ಶತಕದ ದಾಖಲೆಯನ್ನು ಮುರಿದು ಹಾಕುವ ಸಾಧ್ಯತೆಗಳಿವೆ.