
ಸಚಿನ್ ತೆಂಡುಲ್ಕರ್.. ಕ್ರಿಕೆಟ್ ಜಗತ್ತಿಗೆ ಎಂಟ್ರಿಯಾಗಿದ್ದಾಗಲೇ ಈ ಹೆಸರಿನಲ್ಲೊಂದು ಮಾಂತ್ರಿಕತೆಯ ಶಕ್ತಿ ಇತ್ತು. ಈಗಾಗಲೇ ಸಚಿನ್ ಏನು ಎಂಬುದು ಎಲ್ಲರಿಗೂ ಗೊತ್ತು. 90ರ ದಶಕದಲ್ಲಿ ಸಚಿನ್ ಆಡುತ್ತಿದ್ದ ರೀತಿಗೆ ಇಡೀ ಕ್ರಿಕೆಟ್ ಜಗತ್ತೇ ತಲ್ಲಣಗೊಳ್ಳುತ್ತಿತ್ತು. ಇದೀಗ ಸಚಿನ್ ನಿವೃತ್ತಿಯಾಗಿ ಅದೆಷ್ಟೋ ವರ್ಷಗಳು ಉರುಳಿವೆ. ಆದ್ರೂ ಸಚಿನ್ ಬ್ಯಾಟಿಂಗ್ ವೈಖರಿಯನ್ನು ಎಂದೆಂದೂ ಮರೆಯೋಕೆ ಆಗಲ್ಲ. ಆಗುವುದೂ ಇಲ್ಲ.
ಸದ್ಯ ಎಲ್ಲಾ ಕ್ರಿಕೆಟಿಗರು ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದಾರೆ. ತಮ್ಮ ಗತಕಾಲದ ನೆನಪುಗಳನ್ನು ಪ್ರತಿಯೊಬ್ಬರೂ ಬಿಚ್ಚಿಡುತ್ತಿದ್ದಾರೆ. ಹಾಗೇ ಒಂದು ಕಾಲದ ಸಚಿನ್ ಒಡನಾಡಿ ಸಂಜಯ್ ಮಾಂಜ್ರೇಕರ್ ಸಚಿನ್ ಆಟವನ್ನು ನೆನಪಿಸಿಕೊಂಡಿದ್ದಾರೆ. ಅಂದ ಹಾಗೇ ಆಗೀನ ಕ್ರಿಕೆಟ್ ಆಟದ ಶೈಲಿಗೂ ಈಗೀನ ಆಟದ ಶೈಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಎಷ್ಟೇ ವಿವಾದಗಳಿದ್ರೂ ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಆಟ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ಹಾಗೇ ಆಟದ ಖದರ್ ಕೂಡ ಹೆಚ್ಚಿದೆ.
ಹಿಂದೆಯೆಲ್ಲಾ ಕ್ರಿಕೆಟ್ ಆಟವಾಡುತ್ತಿದ್ದದ್ದು ಸಾಂಪ್ರಾದಾಯಿಕ ಶೈಲಿಯಲ್ಲೇ. ಅದ್ರಲ್ಲೂ ಭಾರತ ಕ್ರಿಕೆಟ್ ತಂಡದ ಆಟಗಾರರು ಸಂಪ್ರದಾಯಕ್ಕೆ ವಿರುದ್ಧವಾಗಿ ಆಡುತ್ತಿರಲಿಲ್ಲ. ಆಗೊಮ್ಮೆ ಹೀಗೊಮ್ಮೆ ಆಕ್ರಮಣಕಾರಿ ಆಟವನ್ನು ಆಡುತ್ತಿದ್ದರು. ಆದ್ರೆ ಭಾರತೀಯ ಮಟ್ಟಿಗೆ ಆ ಸಂಪ್ರದಾಯವನ್ನು ಮುರಿದು ಹಾಕಿದ್ದು ಸಚಿನ್ ತೆಂಡುಲ್ಕರ್. ಹಾಗಂತ ಸ್ವತಃ ಸಂಜಯ್ ಮಾಂಜ್ರೆಕರ್ ಹೇಳ್ತಾರೆ.
ಹೌದು, ಬೌಲರ್‍ಗಳ ಒಳ್ಳೆಯ ಎಸೆತಗಳಿಗೆ ಬ್ಯಾಟ್ಸ್ ಮೆನ್‍ಗಳು ಗೌರವ ಕೊಡುತ್ತಿದ್ದರು. ಕೆಟ್ಟ ಎಸೆತಗಳಿಗೆ ಮಾತ್ರ ರನ್ ದಾಖಲಿಸುತ್ತಿದ್ದರು. ಆದ್ರೆ ಸಚಿನ್ ಹಾಗಲ್ಲ. ಒಳ್ಳೆಯ ಎಸೆತಗಳಿಗೂ ರನ್ ಗಳಿಸುತ್ತಿದ್ದರು. ಒಳ್ಳೆಯ ಎಸೆತಗಳಿಗೂ ರನ್ ದಾಖಲಿಸುತ್ತಿದ್ದ ಭಾರತದ ಮೊದಲ ಬ್ಯಾಟ್ಸ್ ಮೆನ್ ಸಚಿನ್ ತೆಂಡುಲ್ಕರ್ ಅಂತ ಸಂಜಯ್ ಮಾಂಜ್ರೆಕರ್ ಹೇಳಿದ್ದಾರೆ.
ಒಳ್ಳೆಯ ಎಸೆತಗಳಿಗೆ ರಕ್ಷಣಾತ್ಮಕವಾಗಿ ಆಡುತ್ತಿದ್ದರು ಭಾರತೀಯ ಬ್ಯಾಟ್ಸ್ ಮೆನ್‍ಗಳು. ಆದ್ರೆ ಸಚಿನ್ ಒಳ್ಳೆಯ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗಟ್ಟುತ್ತಿದ್ದರು. 1990ರಿಂದ 1997ರವರೆಗೆ ಭಾರತ ಕ್ರಿಕೆಟ್ ತಂಡ ಸಚಿನ್ ಮೇಲೆ ಅವಲಂಬಿತವಾಗಿತ್ತು. . ಆನಂತರ ಗಂಗೂಲಿ, ರಾಹುಲ್ ಸಚಿನ್‍ಗೆ ಸಾಥ್ ನೀಡಿದ್ದರು ಎಂದು ಮಾಂಜ್ರೆಕರ್ ಹೇಳ್ತಾರೆ.








