ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್ ಹೀರೋ.. ಡಾಲರ್.. ಯೂರೋ..ರೂಪಾಯಿ.. ಹರಿಯುವ ನದಿಯಂತೆ ಸರಾಗವಾಗಿ ಹರಿದು ಬಂದು ಡ್ಯಾಮ್‍ನಲ್ಲಿ ಸಂಗ್ರಹವಾಗುವ ನೀರಿನಂತೆ ಮೆಸ್ಸಿ ಬ್ಯಾಂಕ್ ಆಕೌಂಟ್‍ನಲ್ಲಿ ದುಡ್ಡು ತುಂಬಿ ಹರಿಯುತ್ತಿದೆ. ಕ್ರೀಡಾ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರ. ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಆರಾಧಕ.. ಸಾಮಾಜಿಕ ಜಾಲ ತಾಣದಲ್ಲಿ ಸೂಜಿಗಲ್ಲಿನಂತೆ ಆಕರ್ಷಿಸುವ ಮಾಂತ್ರಿಕ ಈ ನಮ್ಮ ಲಿಯೊನಾಲ್ ಮೆಸ್ಸಿ..! ಇದರಲ್ಲಿ ಎರಡು ಮಾತಿಲ್ಲ. ಯಾವುದೇ ಅನುಮಾನವೂ ಇಲ್ಲ..!
ಹೌದು.. ಎಲ್ಲಿಯ ಅರ್ಜೆಂಟಿನಾ.. ಎಲ್ಲಿಯ ಭಾರತ..ಯಾಕೆಂದ್ರೆ ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮೆಸ್ಸಿ ಅಭಿಮಾನಿಗಳು ಇದ್ದಾರೆ ಅಂದ್ರೆ ಭಾರತೀಯ ಫುಟ್‍ಬಾಲ್ ಅಭಿಮಾನಿಗಳ ಮನದಲ್ಲಿ ಯಾವ ರೀತಿ ಮೋಡಿ ಮಾಡಿರಬಹುದು..? ಜಸ್ಟ್ ಊಹಿಸಿಕೊಳ್ಳಿ.. ಇದರಲ್ಲಿ ಯಾವುದೇ ರೀತಿ ಮತ್ಸರವಿಲ್ಲ. ಅಭಿಮಾನ ಅವರವರಿಗೆ ಬಿಟ್ಟ ವಿಚಾರ..!
ಹಾಗೇ ನೋಡಿದ್ರೆ ಫುಟ್‍ಬಾಲ್ ಮತ್ತು ಭಾರತಕ್ಕಿರುವ ನಂಟು ಇಂದು ನಿನ್ನೆಯದಲ್ಲ. ಬೂಟ್ ಇಲ್ಲದೆ ಬರಿಗಾಲಿನಲ್ಲೇ ಆಡಿರುವ ಷಣ್ಮುಗಂನಿಂದ ಹಿಡಿದು ವಿಜಯನ್, ಸುನಿಲ್ ಚೆಟ್ರಿ ತನಕ ಭಾರತದಲ್ಲಿ ಅದ್ಭುತ ಫುಟ್‍ಬಾಲ್ ಆಟಗಾರರು ವಿಶ್ವ ಫುಟ್‍ಬಾಲ್‍ನಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅಷ್ಟೇ ಯಾಕೆ.. ಕೊಲ್ಕತ್ತಾ, ಗೋವಾ ಬಿಡಿ.. ನಮ್ಮ ಬೆಂಗಳೂರಿನ ಹಲಸೂರಿನ ಗೌತಮ್‍ಪುರವನ್ನು ಮಿನಿ ಬ್ರೆಜಿಲ್ ಅಂತ ಕರೆಯಲಾಗುತ್ತಿದೆ. ಅಷ್ಟೇ ಅಲ್ಲ, ಬ್ರೆಜಿಲ್‍ನ ದಂತಕಥೆ ಪೀಲೆ ಪ್ರತಿಮೆಯನ್ನು ಕೂಡ ಇಲ್ಲಿ ನಾವು ನೋಡಬಹುದು. ಇನ್ನೂ ವಿಶ್ವ ಫುಟ್‍ಬಾಲ್ ರಂಗದ ಮಹಾನ್ ಆಟಗಾರ ಡಿಯಾಗೊ ಮರಡೋನಾ ಸೇರಿದಂತೆ ಇನ್ನೊಬ್ಬ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಖ್ಯಾತಿಯ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು ಆರಾಧಿಸುವವರು ಕೂಡ ನಮ್ಮ ಭಾರತದಲ್ಲಿದ್ದಾರೆ. ಅದರಲ್ಲೂ ಗೋವಾ ಬಿಡಿ.., ಪಶ್ಚಿಮ ಬಂಗಾಳದ ಮಿರ್‍ಪುರ್‍ನಲ್ಲಿ ರೋನಾಲ್ಡೊನನ್ನು ಮನಸಾರೆ ಪ್ರೀತಿಸುವ ಅಭಿಮಾನಿಗಳಿದ್ದಾರೆ.
ಈಗ ಪ್ರಶ್ನೆ ಇರೋದು.. ಕ್ರಿಸ್ಟಿಯಾನೊ ರೋನಾಲ್ಡೊ.. ಲಿಯೊನಾಲ್ ಮೆಸ್ಸಿ ನಡುವೆ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಯಾರು ಅನ್ನೋದು..? ಈ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಯಾಕಂದ್ರೆ ಇಬ್ರೂ ಕೂಡ ಫುಟ್‍ಬಾಲ್ ಜಗತ್ತಿನ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಪ್ಲೇಯರ್ಸ್. ಇಬ್ಬರ ನಡುವೆ ಹೋಲಿಕೆ ಮಾಡೋದು ಕೂಡ ಸರಿಯಲ್ಲ. ಬಡತನ, ಹೃದಯದ ಸಮಸ್ಯೆಯನ್ನು ಮೆಟ್ಟಿ ವಿಶ್ವದ ಶ್ರೇಷ್ಠ ಹಾಗೂ ಶ್ರೀಮಂತ ಫುಟ್‍ಬಾಲ್ ಆಟಗಾರನಾಗಿದ್ದು ಕ್ರಿಸ್ಟಿಯಾನೋ ರೋನಾಲ್ಡೊ ಕಥೆಯಾದ್ರೆ, ಫುಟ್‍ಬಾಲ್ ಪ್ರೀತಿಯ ಮನೆತನದಲ್ಲಿ ಹುಟ್ಟಿ ಬೆಳೆದ ಫುಟ್‍ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನಾಗಿ ರೂಪುಗೊಂಡಿದ್ದು ಮೆಸ್ಸಿಯ ಹಿರಿಮೆ. ಆಟ.. ದುಡ್ಡು, ಬದ್ದತೆ.. ಕೌಶಲ್ಯ, ಶಿಸ್ತು.. ಹೀಗೆ ಪ್ರತಿಯೊಂದು ವಿಷ್ಯದಲ್ಲೂ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ನಡುವೆ ರಾಜೀಯಾಗೋ ಪ್ರಶ್ನೆಯೇ ಇಲ್ಲ. ಒಂದೇ ಜನರೇಷನ್‍ನಲ್ಲಿ ಇಬ್ರೂ ಕೂಡ ಅದ್ಭುತ ಫುಟ್‍ಬಾಲ್ ಆಟಗಾರರಾಗಿ ರೂಪುಗೊಂಡಿದ್ದು, ತನ್ನದೇ ಆದ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದು ಇವರಿಬ್ಬರ ಆಟದಿಂದಲೇ..ಹೀಗಾಗಿ ಯಾರು ಶ್ರೇಷ್ಠರು ಎಂಬುದು ಮುಖ್ಯವಲ್ಲ. ಫುಟ್‍ಬಾಲ್ ಆಟಕ್ಕೆ ಮಾದರಿ. ಪ್ರೇರಣೆ.. ಸ್ಪೂರ್ತಿಯಾಗಿದ್ದಾರೆ ಎಂಬುದು ಅಷ್ಟೇ ಸತ್ಯ. ಹೀಗಾಗಿ ಇಬ್ಬರನ್ನು ಹೋಲಿಕೆ ಮಾಡೋದು ಬೇಡ ಅನ್ನೋದು ನನ್ನ ಅಭಿಪ್ರಾಯ.
ಅದೇನೇ ಇರಲಿ.. ಲಿಯೊನಾಲ್ ಮೆಸ್ಸಿ ಭಾರತ ಪ್ರವಾಸದ ಹಿಂದಿನ ಉದ್ದೇಶವೇನು..? ವಿಶ್ವದ ದುಬಾರಿ ಆಟಗಾರ ಭಾರತದಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಿರೋದು ಯಾಕೆ..? ಅಂದ ಹಾಗೇ ಮೆಸ್ಸಿ ಭಾರತಕ್ಕೆ ಬಂದಿರೋದು ತಪ್ಪಲ್ಲ. ಆದ್ರೆ ಭಾರತೀಯ ಫುಟ್‍ಬಾಲ್ ಆಟಕ್ಕೆ ಜನಪ್ರಿಯತೆಯನ್ನು ತಂದುಕೊಡ್ತಾರಾ..? ಇಷ್ಟೆಲ್ಲಾ ರಾಜಕೀಯ ಡ್ರಾಮಾ ಬೇಕಿತ್ತಾ..? ಒಂದಲ್ಲ. ಲಕ್ಷವಲ್ಲ.. ನೂರಾರು ಕೋಟಿ ಖರ್ಚು ಮಾಡಿ ಮೆಸ್ಸಿ ಭಾರತ ಪ್ರವಾಸ ಮಾಡಿದ್ದಾರೆ. ಚಾರಿಟೇಬಲ್, ಫುಟ್‍ಬಾಲ್ ಅಭಿಯಾನ ಬಿಡಿ.. ಇಲ್ಲಿ ಕಾಂಗ್ರೆಸ್, ಟಿಎಂಸಿ, ಬಿಜೆಪಿ ಎಲ್ಲವೂ ಕೂಡ ಮೆಸ್ಸಿಯ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗುತ್ತಿರುವುದು ಮಾತ್ರ ವಿಷಾದದ ಸಂಗತಿ. ಒಂದು ವೇಳೆ, ಮೆಸ್ಸಿ ಐ ಲೀಗ್‍ನಂತಹ ಮಹತ್ವದ ಟೂರ್ನಿಗೆ ರಾಯಾಭಾರಿಯಾಗಿ ಅಥವಾ ಆಟಗಾರನಾಗಿ ಬರುತ್ತಿದ್ರೆ ಭಾರತೀಯ ಫುಟ್‍ಬಾಲ್‍ಗೆ ಹೊಸ ಆಯಾಮ ಸಿಗುತ್ತಿತ್ತು. ಆದ್ರೆ ಇಲ್ಲಿ ಸಂಘಟಕರು ಹಣ ಮಾಡೋ ಉದ್ದೇಶ ಒಂದು ಕಡೆಯಾದ್ರೆ, ರಾಜಕೀಯ ಪಕ್ಷಗಳು ಜನಪ್ರಿಯತೆ ಪಡೆದುಕೊಳ್ಳಲು ಮಾಡಿರುವ ತಂತ್ರ ಅನ್ನೋದು ಅರ್ಥವಾಗದಿರುವ ವಿಷ್ಯವೇನೂ ಅಲ್ಲ.
ಇವತ್ತು ಅರ್ಜೆಂಟಿನಾದ ಮೆಸ್ಸಿಯ ಪ್ರತಿಮೆಯನ್ನು ನಾವು ಅನಾವರಣ ಮಾಡುತ್ತೇವೆ. ಅದೇ ನಮ್ಮಲ್ಲಿರುವ ಫುಟ್‍ಬಾಲ್ ದಿಗ್ಗಜರ ಪ್ರತಿಮೆಗಳು ನಮ್ಮ ದೇಶದಲ್ಲಿ ಎಷ್ಟೀವೆ..? ನಿಜ, ಭಾರತೀಯ ಫುಟ್‍ಬಾಲ್ ಪ್ರೇಮಿಗಳು ಮೆಸ್ಸಿ ಅಥವಾ, ಪೀಲೆ, ಮರಡೋನಾ, ಕ್ರಿಸ್ಟಿಯಾನೋ ನಂತಹ ಆಟಗಾರರ ಮೇಲೆ ಅಭಿಮಾನವನ್ನು ಇಟ್ಟುಕೊಂಡಿರುವುದು ತಪ್ಪು ಅಂತ ಹೇಳ್ತಿಲ್ಲ. ಆದ್ರೆ ನಮ್ಮ ಭಾರತದ ಫುಟ್‍ಬಾಲ್ ಆಟಗಾರರ ಮೇಲೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ..? ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆಗೈದ ಆಟಗಾರರ ನೆನಪಿನಲ್ಲಿ ಎಷ್ಟು ಟೂರ್ನಿಗಳು ನಡೆಯುತ್ತವೆ..? ಮೊದಲು ನಮ್ಮವರನ್ನು ಬೆಳೆಸಬೇಕು. ಬಳಿಕ ಬೇರೆ ರಾಷ್ಟ್ರದ ಆಟಗಾರರನ್ನು ಪ್ರೀತಿಸಬೇಕು. ನಮ್ಮವರು ನಮಗೆ ಬೇಡ. ಆದ್ರೆ ಬೇರೆ ರಾಷ್ಟ್ರದ ಆಟಗಾರರು ನಮಗೆ ಮಾದರಿ.. ಪ್ರೇರಣೆ. ! ಈ ಧೋರಣೆ ಎಷ್ಟು ಸರಿ..?
ಇಲ್ಲಿ ಮೆಸ್ಸಿಯವರ ಮೂರು ದಿನ ಪ್ರವಾಸದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ಆಗಿದೆ. ಮೆಸ್ಸಿ ನೋಡಲು ಆಗಮಿಸಿದ್ದ ಅಭಿಮಾನಿಗಳು ಸಾವಿರಾರು ಲೆಕ್ಕದಲ್ಲಿ ಖರ್ಚು ಮಾಡಿದ್ದಾರೆ. ಒಂದು ಸೆಲ್ಫಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಪ್ರಧಾನಿ ಮೋದಿಯಿಂದ ಹಿಡಿದು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ರೇವಂತ್ ರೆಡ್ಡಿ, ಫÀಡ್ನವಿಸ್ ತನಕ ಎಲ್ಲರೂ ಮೆಸ್ಸಿಯವರನ್ನು ಬರಮಾಡಿಕೊಂಡಿದ್ದಾರೆ. ಆದ್ರೆ ನಮ್ಮ ಭಾರತೀಯ ಕ್ರೀಡಾಪಟುಗಳಿಗೆ ಇಷ್ಟೊಂದು ಜನಪ್ರಿಯತೆ, ಮಹತ್ವವನ್ನು ನಾವು ಯಾಕೆ ನೀಡುತ್ತಿಲ್ಲ..?
ಹಾಗಂತ ಮೆಸ್ಸಿ ಏನೂ ಸುಮ್ಮನೆ ಭಾರತಕ್ಕೆ ಬಂದಿಲ್ಲ. ಮೂರು ದಿನಗಳ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಸಂಭಾವಣೆ ಪಡೆದುಕೊಂಡಿದ್ದಾರೆ. ಅದೇ ದುಡ್ಡಿನಲ್ಲಿ ನಾವು ನಮ್ಮವರಿಗೋಸ್ಕರ ಫುಟ್‍ಬಾಲ್ ಆಟಗಾರರಿಗೆ ವೆಚ್ಚ ಮಾಡಬಹುದಿತ್ತು ಅಲ್ವಾ..? ಅದೇ ದುಡ್ಡಿನಲ್ಲಿ ಯುವ ಫುಟ್‍ಬಾಲ್ ಆಟಗಾರರಿಗೆ ಖರ್ಚು ಮಾಡುತ್ತಿದ್ರೆ ಕನಿಷ್ಠ ಒಂದಿಬ್ಬರು ಮೆಸ್ಸಿಯಂತಹ ಆಟಗಾರರನೋ, ಸುನೀಲ್ ಚೆಟ್ರಿಯಂತಹ ಆಟಗಾರರನ್ನು ಬೆಳೆಸಬಹುದಿತ್ತು ಅಲ್ವಾ..? ಆದ್ರೆ ನಮಗೆ ಬ್ರ್ಯಾಂಡ್ ಮುಖ್ಯ.. ಫುಟ್‍ಬಾಲ್.. ಫುಟ್‍ಬಾಲ್ ಆಟಗಾರನ ಹೆಸರಿನಲ್ಲಿ ದುಡ್ಡು ಮಾಡಬೇಕು.. ಅದೇನೋ ಅಂತರಲ್ಲ.. ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಅಂತ. ಹಾಗೆ ಮೆಸ್ಸಿ ಟೂರ್ ಕೂಡ.. ಮುಂದೊಂದು ದಿನ ಕ್ರಿಸ್ಟಿಯಾನೋ ರೋನಾಲ್ಡೋ ಕೂಡ ಭಾರತ ಪ್ರವಾಸ ಮಾಡುವ ಸಮಯ ದೂರವಿಲ್ಲ ಅನ್ಸುತ್ತೆ..! ವಿಪರ್ಯಾಸ ಅಂದ್ರೆ ನಮ್ಮ ಯಾವುದೋ ಚಾರಿಟಿ ಸಂಸ್ಥೆಗೆ ಈ ರೀತಿಯ ಐಡಿಯಾಗಳು ನೆನಪು ಆಗ್ತಾವೆ. ಆದ್ರೆ ನಮ್ಮ ಭಾರತೀಯ ಫುಟ್‍ಬಾಲ್ ಸಂಸ್ಥೆಗೆ ಮಾತ್ರ ಈ ರೀತಿಯ ಐಡಿಯಾಗಳು ಯಾಕೆ ಹೊಳೆಯುತ್ತಿಲ್ಲ..? ಒಂದು ವೇಳೆ, ಭಾರತೀಯ ಫುಟ್‍ಬಾಲ್ ಸಂಸ್ಥೆಗೆ ಈ ರೀತಿಯ ಅಲೋಚನೆ ಬರುತ್ತಿದ್ರೆ ಕನಿಷ್ಠ ತನ್ನ ಬೊಕ್ಕಸಕ್ಕೆ ಸ್ವಲ್ಪವಾದ್ರೂ ದುಡ್ಡು ಬರುತ್ತಿತ್ತು. ಆದ್ರೆ ಅವರಿಗೆ ಬೇಕಾಗಿಲ್ಲ.
ಇವತ್ತು ಎಲ್ಲರೂ ಬಿಸಿಸಿಐ ದುಡ್ಡು ಮಾಡುತ್ತಿದೆ ಎಂದು ಹೇಳ್ತಾರೆ. ಆದ್ರೆ ಬಿಸಿಸಿಐ ನಮ್ಮ ಆಟಗಾರರಿಗೆ ಮೊದಲು ಪ್ರಮೋಟ್ ಮಾಡಿ ದುಡ್ಡು ಮಾಡುತ್ತಿದೆ. ಬೇರೆ ದೇಶದ ಆಟಗಾರರಿಗೆ ಮಣೆ ಹಾಕೋದು ಅಷ್ಟಕ್ಕಷ್ಟೇ. ಹೀಗಾಗಿಯೇ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆದಿರೋದು. ಹಾಗಾಗಿ ಮೊದಲು ನಮ್ಮವರನ್ನು ಬೆಳೆಸಿ.. ಆಮೇಲೆ ಬೇರೆಯವರಿಗೆ ಪ್ರಚಾರ ಕೊಡಿ. ಇದು ಭಾರತದ ಇತರೆ ಕ್ರೀಡಾ ಸಂಸ್ಥೆಗಳಿಗೆ ಒಂದು ಕಿವಿ ಮಾತು.
ಏನೇ ಆಗ್ಲಿ.. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಲಿಯೊನಾಲ್ ಮೆಸ್ಸಿ ಅವರು, ಸಚಿನ್ ತೆಂಡುಲ್ಕರ್ ಹತ್ತು ನಂಬರ್‍ನ ಜೆರ್ಸಿ ಪಡೆದುಕೊಂಡಾಗ ಹೆಮ್ಮೆ ಅನ್ನಿಸಿತ್ತು. ಮೆಸ್ಸಿ ದುಡ್ಡಿನಲ್ಲಿ, ಅಭಿಮಾನಿಗಳ ಸಂಖ್ಯೆಗಳಲ್ಲಿ ಸಚಿನ್‍ಗಿಂತ ದೊಡ್ಡವರಿರಬಹುದು.. ಹಾಗೇ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟು ಆಗಿರಬಹುದು.. ಆದ್ರೆ ಮುಂಬೈನಲ್ಲಿ.. ಭಾರತದಲ್ಲಿ ಸಚಿನ್ ಅಂದ್ರೆ ಅದು ಒನ್ ಒನ್ಲಿ ಸಚಿನ್.. ! ಅದಕ್ಕೆ ಅಂದಿರೋದು ಕ್ರಿಕೆಟ್ ದೇವ್ರ ದರ್ಶನ ಪಡೆಯಲು ಆಗಮಿಸಿದ ಫುಟ್‍ಬಾಲ್ ಜಗತ್ತಿನ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಪ್ಲೇಯರ್ ಲಿಯೊನಾಲ್ ಮೆಸ್ಸಿ ಅಂತ.. ಏನೇ ಆಗ್ಲಿ… ಏನೇ ಅಂದ್ರೂ ನಮ್ಮವರನ್ನು ಎಂದೆದಿಗೂ ಬಿಟ್ಟುಕೊಡೋ ಪ್ರಶ್ನೆಯೇ ಇಲ್ಲ.
ಸನತ್ ರೈ







