ವಾಸೀಮ್ ಅಕ್ರಮ್ ಕಂಡ ಶ್ರೇಷ್ಠ ಐದು ಬ್ಯಾಟ್ಸ್ ಮೆನ್‍ಗಳಲ್ಲಿ ಸಚಿನ್‍ಗೆ ಐದನೇ ಸ್ಥಾನ …!
ವಿಶ್ವ ಕ್ರಿಕೆಟ್ ನಲ್ಲಿ ಹಲವಾರು ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳು ಬಂದು ಹೋಗಿದ್ದಾರೆ. ಇನ್ನು ಕೆಲವರು ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳಾಗಬೇಕು ಎಂದು ಆಡ್ತಾನೇ ಇರುತ್ತಾರೆ. ಯಾಕಂದ್ರೆ ಇದು ನಿಂತ ನೀರಲ್ಲ. ನೀರು ಸದಾ ಹರಿಯುವ ಹಾಗೇ ವಿಶ್ವ ಕ್ರಿಕೆಟ್ ನಲ್ಲಿ ಅದೆಷ್ಟೋ ಕ್ರಿಕೆಟಿಗರು ತಮ್ಮ ಅದ್ಭುತ ಸಾಧನೆಗಳ ಮೂಲಕ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ರಾರಾಜಿಸುತ್ತಿರುತ್ತಾರೆ.
ಈಗಾಗಲೇ ವಿಶ್ವ ಕ್ರಿಕೆಟ್‍ನ ದಾಖಲೆಗಳ ಪುಟದಲ್ಲಿ ಅದೆಷ್ಟೋ ಹೆಸರುಗಳು ದಾಖಲಾಗಿವೆ. ಡಾನ್ ಬ್ರಾಡ್ಮನ್ ಸರಾಸರಿ ಲೆಕ್ಕಚಾರದಲ್ಲಿ ಇಂದಿಗೂ ಅಗ್ರ ಸ್ಥಾನದಲ್ಲಿದ್ದಾರೆ. ಹಾಗೇ ರನ್ ಮತ್ತು ಶತಕದ ಸಂಖ್ಯೆಯಲ್ಲಿ ಸಚಿನ್ ತೆಂಡುಲ್ಕರ್ ಹೆಸರು ಇನ್ನೂ ಪ್ರಜ್ವಲಿಸುತ್ತಿದೆ. ಹಾಗಂತ ಇವರಿಬ್ಬರೇ ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳು ಅಂತ ಹೇಳುವ ಹಾಗಿಲ್ಲ. ಆಯಾ ಕಾಲಕ್ಕೆ ತಕ್ಕಂತೆ ಬ್ಯಾಟ್ಸ್ ಮೆನ್‍ಗಳು ಹೊರಹೊಮ್ಮಿದ್ದಾರೆ. ಹೊರಹೊಮ್ಮುತ್ತಿದ್ದಾರೆ.
ನೀವು ವಾಸೀಮ್ ಅಕ್ರಮ್ ಅವರ ಹೆಸರನ್ನು ಕೇಳಿರಬಹುದು. ಪಾಕ್‍ನ ಘಾತಕ ವೇಗಿ. ಅದ್ಭುತ ಶೈಲಿಯ ಬೌಲಿಂಗ್
ಮೂಲಕವೇ ಎದುರಾಳಿ ಬ್ಯಾಟ್ಸ್ ಮೆನ್‍ಗಳಿಗೆ ನಡುಕ ಹುಟ್ಟಿಸುವಂತಹ ಬೌಲರ್. ಹಾಗೇ 22 ಯಾರ್ಡ್ ಪಿಚ್ ನಲ್ಲಿ ವಾಸೀಮ್ ಅಕ್ರಮ್ ಮತ್ತು ಸಚಿನ್ ತೆಂಡುಲ್ಕರ್ ನಡುವಿನ ಹೋರಾಟ ರೋಮಾಂಚನಗೊಳಿಸುತ್ತಿತ್ತು. ಇಬ್ಬರು ಕೂಡ ಅಪ್ರತಿಮರೇ. ಹಾಗೇ ಇಬ್ಬರು ಕೂಡ ಒಬ್ಬರನೊಬ್ಬರನ್ನು ಗೌರವಿಸುತ್ತಿದ್ದರು. ಆದ್ರೂ ವಾಸೀಮ್ ಅಕ್ರಮ್ ಅವರ ಶ್ರೇಷ್ಠ ಪಟ್ಟಿಯಲ್ಲಿ ಸಚಿನ್‍ಗೆ ಐದನೇ ಸ್ಥಾನವನ್ನು ಕೊಟ್ಟಿದ್ದಾರೆ.
ಅಕ್ರಮ್ ಅವರ ಮೊದಲ ಸ್ಥಾನ ವೆಸ್ಟ್ ಇಂಡೀಸ್‍ನ ದಂತಕಥೆ ಸರ್ ವಿವಿಯನ್ ರಿಚಡ್ರ್ಸ್ ಗೆ ಸಲ್ಲುತ್ತದೆ. ವಿಶ್ವ ಕ್ರಿಕೆಟ್‍ನ ಒಬ್ಬ ಅದ್ಭುತ ಬ್ಯಾಟ್ಸ್ ಮೆನ್ ಅಂತ ವಾಸೀಮ್ ಅಕ್ರಮ್ ಬಣ್ಣಿಸಿದ್ದಾರೆ. ರಿಚಡ್ರ್ಸ್ ಅವರು ಟೆಸ್ಟ್ ನಲ್ಲಿ 8000 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 6000 ರನ್ ದಾಖಲಿಸಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿದ್ದಾರೆ ನ್ಯೂಜಿಲೆಂಡ್ ನ ಮಾರ್ಟಿನ್ ಕ್ರೋವ್. ಮಾರ್ಟಿನ್ ಕ್ರೋವ್ ಅವರು ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ನ್ಯೂಜಿಲೆಂಡ್‍ನ ಕ್ರಿಕೆಟ್‍ನ ಅಪ್ರತಿಮ ಆಟಗಾರನಾಗಿರುವ ಮಾರ್ಟಿನ್ ಕ್ರೋವ್ ಅವರು ಸುಮಾರು 10ಸಾವಿರ ರನ್‍ಗಳನ್ನು ಪೇರಿಸಿದ್ದಾರೆ.
ಇನ್ನು ಮೂರನೇ ಸ್ಥಾನವನ್ನು ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾನಿಗೆ ನೀಡಿದ್ದಾರೆ ಅಕ್ರಮ್. ಬ್ರಿಯನ್ ಲಾರಾ ಓರ್ವ ಶ್ರೇಷ್ಠ ಬ್ಯಾಟ್ಸ್ ಮೆನ್ ಮಾತ್ರವಲ್ಲ. ಒಬ್ಬ ಅತ್ಯುತ್ತಮ ನಾಯಕ ಕೂಡ ಹೌದು. ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿಕೊಂಡು ವೆಸ್ಟ್ ಇಂಡೀಸ್ ಕ್ರಿಕೆಟ್‍ಗೆ ಗೆಲುವಿನ ಸಂಭ್ರಮವನ್ನೂ ಕೂಡ ತಂದುಕೊಟ್ಟಿದ್ದಾರೆ. ಬ್ರಿಯಾನ್ ಲಾರಾ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ತಲಾ 10ಸಾವಿರ ರನ್ ದಾಖಲಿಸಿದ್ದಾರೆ.
ಹಾಗೇ ನಾಲ್ಕನೇ ಸ್ಥಾನವನ್ನು ಪಾಕಿಸ್ತಾನದ ಇಂಜಮಮ್ ಉಲ್ ಹಕ್ ಅವರಿಗೆ ನೀಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಆಗಿರುವ ಇಂಜಮಮ್ ಅವರು ಇಂಝಿ ಅಂತನೇ ಫೇಮಸ್. ಪಾಕ್ ತಂಡದ ನಾಯಕನಾಗಿದ್ದ ಇಂಝಿ ಅವರು ಟೆಸ್ಟ್ ನಲ್ಲಿ 8000 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಪೇರಿಸಿದ್ದಾರೆ.
ಐದನೇ ಸ್ಥಾನವನ್ನು ಭಾರತದ ಸಚಿನ್ ತೆಂಡುಲ್ಕರ್‍ಗೆ ಅಕ್ರಮ್ ನೀಡಿದ್ದಾರೆ. ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಯಾರು ಮಾಡದ ಸಾಧನೆ ಹಾಗೂ ದಾಖಲೆಗಳನ್ನು ಮಾಡಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 30 ಸಾವಿರ ರನ್ ಪೇರಿಸಿದ್ದಾರೆ. ಸಚಿನ್ ತೆಂಡುಲ್ಕರ್‍ಗೆ ಗಾಡ್ ಆಫ್ ಕ್ರಿಕೆಟ್ ಅನ್ನೋ ಬಿರುದು ಕೂಡ ಇದೆ. ಆದ್ರೆ ವಾಸೀಮ್ ಅಕ್ರಮ್ ಅವರು ಸಚಿನ್ ತೆಂಡುಲ್ಕರ್‍ಗೆ ಐದನೇ ಸ್ಥಾನವನ್ನು ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.








