ಸಚಿನ್ ಫ್ಲಾಶ್ ಬ್ಯಾಕ್… ನೀರಿನಲ್ಲಿ ಬ್ಯಾಟಿಂಗ್ ತಾಲೀಮು ನಡೆಸುತ್ತಿದ್ದ ಮಾಸ್ಟರ್ ಬ್ಲ್ಯಾಸ್ಟರ್..!
ಕ್ರಿಕೆಟ್ ಆಟ ಹಾಗೇ ಸುಮ್ಮನೆ ಸಿದ್ದಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಪರಿಶ್ರಮಪಡಬೇಕು. ಬದ್ಧತೆ ಇರಬೇಕು. ದೂರದೃಷ್ಟಿ ಇರಬೇಕು. ಆಟದ ಮೇಲೆ ಅಪಾರವಾದ ಪ್ರೀತಿ ಇರಬೇಕು. ಕಠಿಣ ಅಭ್ಯಾಸ ನಡೆಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲವನ್ನು ತ್ಯಾಗಮಾಡಬೇಕು. ಸಾಧನೆ, ಯಶಸ್ಸು ಸಾಧಿಸುತ್ತೇನೆ ಅನ್ನೋ ಅಚಲವಾದ ನಂಬಿಕೆ ಬೇಕು. ಆಗ ಮಾತ್ರ ಒಬ್ಬ ಪರಿಪೂರ್ಣ ಕ್ರಿಕೆಟಿಗನಾಗಲು ಸಾಧ್ಯ.
ಇದಕ್ಕೆ ಸಾಕಷ್ಟು ಕ್ರಿಕೆಟಿಗರು ಸಾಕ್ಷಿಯಾಗಿ ನಮ್ಮ ಕಣ್ಣಮುಂದೆ ಇದ್ದಾರೆ. ವಿಶ್ವದ ಪ್ರಚಂಡ ಆಟಗಾರರಾದ ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹೀಗೆ ಹಲವಾರು ಹೆಸರುಗಳಿವೆ.
ಅದ್ರಲ್ಲೂ ಕ್ರಿಕೆಟ್ ಆಟವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಕ್ರಿಕೆಟಿಗರಲ್ಲಿ ಮೊದಲಿಗೆ ಕಾಣ ಸಿಗೋ ಹೆಸರು ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್. ಇವರಿಬ್ಬರ ಬದ್ಧತೆ ಇಂದಿಗೂ ಎಂದೆಂದಿಗೂ ಯುವ ಆಟಗಾರರಿಗೆ ಸ್ಪೂರ್ತಿಯಾಗಿರುತ್ತದೆ. ಇದಕ್ಕೆ ಈಗ ವಿರಾಟ್ ಕೊಹ್ಲಿ ಕೂಡ ಸೇರಿಕೊಳ್ಳುತ್ತಾರೆ.
ಹೌದು, ಕ್ರಿಕೆಟ್ ಆಟವನ್ನು ತನ್ನ ಉಸಿರು ಅಂತ ನಂಬಿಕೊಂಡು ಬಂದವರಲ್ಲಿ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಮುಂಚೂಣಿಯಲ್ಲಿದ್ದಾರೆ. ದ್ರಾವಿಡ್ ಅಂತೂ ಈಗ ಯುವ ಕ್ರಿಕೆಟಿಗರ ಪಾಲಿಗೆ ಗುರುವಾಗಿದ್ದಾರೆ. ಸಚಿನ್ ತೆಂಡುಲ್ಕರ್ ಕೂಡ ದ್ರಾವಿಡ್ ಹಾದಿಯಲ್ಲಿ ಇರದಿದ್ರೂ ಕೂಡ ಸಮಯ ಸಿಕ್ಕಾಗ ಯುವ ಆಟಗಾರರಿಗೆ ಮಾರ್ಗದರ್ಶನ ಸಲಹೆಗಳನ್ನು ನೀಡುತ್ತಿದ್ದಾರೆ.
ಒಂದಂತೂ ನಿಜ, ದಶಕದ ಹಿಂದಿನ ಕ್ರಿಕೆಟಿಗೂ ಈಗೀನ ಕ್ರಿಕೆಟಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರರ ಮನಸ್ಥಿತಿಯಿಂದ ಹಿಡಿದು ಆಟದ ನಿಯಮಗಳಲ್ಲೂ ಕೆಲವೊಂದು ಬದಲಾವಣೆಯಾಗಿದೆ. ಅದಕ್ಕೆ ತಕ್ಕಂತೆ ಒಗ್ಗಿಕೊಂಡು ಆಡಬೇಕಾದ ಪರಿಸ್ಥಿತಿ ಇದೆ.
80-90ರ ದಶಕಕ್ಕೆ ಹೋಲಿಕೆ ಮಾಡಿದ್ರೆ ಕಳೆದ ಎರಡು ದಶಕಗಳಲ್ಲಿ ಭಾರತೀಯ ಕ್ರಿಕೆಟಿಗರು ಬಿಡುವಿಲ್ಲದೇ ಪಂದ್ಯಗಳನ್ನು ಆಡುತ್ತಿದ್ದಾರೆ. ಸ್ಪರ್ಧಾತ್ಮಕತೆ ಕೂಡ ಹೆಚ್ಚುತ್ತಿರುವುದರಿಂದ ಅವಕಾಶವನ್ನು ಕೈಚೆಲ್ಲಿಕೊಳ್ಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇನೇ ಇರಲಿ, ಸಚಿನ್ ಆಗಿರಬಹುದು. ಅಥವಾ ರಾಹುಲ್ ದ್ರಾವಿಡ್ ಆಗಿರಬಹುದು. ತಮ್ಮ ಫಾರ್ಮ್ ಕಳೆದುಕೊಂಡಾಗ ಒಂದೋ ದೇಶಿ ಪಂದ್ಯಗಳನ್ನು ಆಡುತ್ತಿದ್ದರು. ಇಲ್ಲದಿದ್ರೆ ನೆಟ್ಸ್ ನಲ್ಲಿ ಹಲವಾರು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದರು. ಅಭ್ಯಾಸ ನಡೆಸುತ್ತಿರುವಾಗಲೇ ಹೊಸ ಹೊಸ ಶಾಟ್ರ್ಸ್ ಗಳನ್ನು ಕಲಿಯುತ್ತಿದ್ದರು. ಈಗೀನ ಟಿ-ಟ್ವೆಂಟಿ ಪಂದ್ಯಗಳನ್ನು ನೋಡುತ್ತಾ ಇದ್ರೆ ನಮಗೆ ಗಲ್ಲಿ ಕ್ರಿಕೆಟ್ ನೆನಪಾಗುತ್ತೆ. ಆದ್ರೆ ಅಂತಹ ಶಾಟ್ಸ್ (ಹೊಡೆತ)ಗಳನ್ನು ಹೊಡೆಯಬೇಕಾದ್ರೆ ನೆಟ್ಸ್ ನಲ್ಲಿ ತಾಲೀಮು ಅತ್ಯಗತ್ಯ.
ನಿಮಗೆ ನೆನಪಿರಬಹುದು.. ಸಚಿನ್ ತೆಂಡುಲ್ಕರ್ ಪ್ರತಿ ಸರಣಿಗೂ ಹೇಗೆ ಸಿದ್ಧರಾಗುತ್ತಿದ್ದರು ಎಂಬುದು. ಹೊಸ ಹೊಸ ಅನ್ವೇಷಣೆ ಮಾಡಿಕೊಂಡು, ಎದುರಾಳಿ ಬೌಲರ್ ಗಳಿಗೆ ತನ್ನ ವೀಕ್ ನೆಸ್ ಗಳು ಗೊತ್ತಾಗಬಾರದು ಅನ್ನೋ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ತಾಲೀಮು ನಡೆಸುತ್ತಿದ್ದರು.
ಬೌಲಿಂಗ್ ಮಿಷನ್ ಗಿಂತ ಹೆಚ್ಚಾಗಿ ಸಚಿನ್ ತೆಂಡುಲ್ಕರ್ ಹೆಚ್ಚಾಗಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದದ್ದು ಬೆಂಗಳೂರಿನ ಹುಡುಗ ರಾಘವೇಂದ್ರ ಜೊತೆ. ರಾಘವೇಂದ್ರ ಎಸೆಯುವ ಎಸೆತಗಳಿಂದಲೇ ಸಚಿನ್ ಹೊಸತನವನ್ನು ಕಲಿತುಕೊಂಡಿದ್ದಾರೆ. ಅದಕ್ಕಾಗಿಯೇ ರಾಘವೇಂದ್ರ ನನ್ನು ಮುಂಬೈಗೆ ಕರೆಸಿಕೊಂಡಿದ್ದು, ವಿದೇಶಿ ಪ್ರವಾಸದ ವೇಳೆ ಆತ ಜೊತೆಯಾಗಿದ್ದದ್ದು ಎಲ್ಲವೂ ಹಳೆಯ ಕಥೆ.
ಅದೇ ರೀತಿ ಶೇನ್ ವಾರ್ನ್ ಎಸೆತಗಳನ್ನು ಎದುರಿಸಲು ಸಚಿನ್ ನೆಟ್ಸ್ ನಲ್ಲಿ ಯಾವ ರೀತಿ ಬ್ಯಾಟಿಂಗ್ ನಡೆಸಿದ್ದರು ಎಂಬುದು ಕೂಡ ಈಗ ಹಳೆಯ ನೆನಪು.
ಇದೀಗ ಸಚಿನ್ ತೆಂಡುಲ್ಕರ್ ತನ್ನ ಹಳೆಯ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಒದ್ದೆಯಾದ ಪಿಚ್ ಅಂದ್ರೆ ಪಿಚ್ ನಲ್ಲಿ ಪೂರ್ತಿಯಾಗಿ ನೀರು ತುಂಬಿಕೊಂಡು ಅಲ್ಲಿ ಲೆದರ್ ಬಾಲ್ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
Love and passion for the game always helps you find new ways to practice, and above all to enjoy what you do.#FlashbackFriday pic.twitter.com/7UHH13fe0Q
— Sachin Tendulkar (@sachin_rt) September 27, 2019
ಇಲ್ಲಿ ಸಚಿನ್ ತೆಂಡುಲ್ಕರ್ ಅವರಿಗೆ ಹಳೆಯ ವಿಡಿಯೋ ನೆನಪಿಗೆ ಬರಬಹುದು. ಆದ್ರೆ ಅದರ ಹಿಂದಿನ ಉದ್ದೇಶ ಬೇರೆ ಇದೆ. ಯುವ ಕ್ರಿಕೆಟಿಗರು ಕಲಿಯಲು ಸಾಕಷ್ಟಿದೆ. ಪ್ರತಿ ಸರಣಿಗೂ ಮುನ್ನ ಯಾವ ರೀತಿ ಸಿದ್ಧವಾಗಬೇಕು ಎಂಬುದಕ್ಕೆ ಇದೊಂದು ಸ್ಫೂರ್ತಿಯಾಗಬಹುದು.
ಆಟದ ಮೇಲಿನ ಪ್ರೀತಿ ಮತ್ತು ಆಸಕ್ತಿ ನಿಮಗೆ ಸಹಾಯವಾಗಬಹುದು. ಹೊಸತನವನ್ನು ಕಲಿಯುವಾಗ ಅದರಲ್ಲಿ ಖುಷಿಯೇ ಬೇರೆ ಎಂಬುದು ಸಚಿನ್ ಅವರ ಉವಾಚವಾಗಿದೆ.
ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ನಂತಹ ಆಟಗಾರರು ಯುವ ಆಟಗಾರರಿಗೆ ಯಾವತ್ತಿಗೂ ದಾರಿದೀಪ. ಸ್ಫೂರ್ತಿಯ ಚಿಲುಮೆ.