ನಟ ಸುಶಾಂತ್ ಸಿಂಗ್ ಬ್ಯಾಟಿಂಗ್ ಶೈಲಿಯನ್ನು ನೋಡಿದಾಗ ಸಚಿನ್ ಕೂಡ ಅಚ್ಚರಿಗೊಂಡಿದ್ರಂತೆ…!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನು ನೆನಪು ಮಾತ್ರ. ಮುಂಬೈನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಬಿಟ್ಟು ಹೋದ ನೆನಪುಗಳು ಸಾಕಷ್ಟಿವೆ. ಒಬ್ಬ ನಟನಾಗಿ ಅವರು ಬೆಳೆದು ಬಂದ ರೀತಿ, ಚಿತ್ರದ ಪಾತ್ರಕ್ಕೆ ಜೀವ ತುಂಬುತ್ತಿದ್ದ ಪರಿ, ಅದಕ್ಕಾಗಿ ಪಡುತ್ತಿದ್ದ ಶ್ರಮ ಎಲ್ಲವೂ ಈಗ ನೆನಪಿನ ಪುಟದಲ್ಲಿ ದಾಖಲಾಗುತ್ತದೆ.
ಹೌದು, ಸುಶಾಂತ್ ಸಿಂಗ್ ಒಬ್ಬ ಕಲಾವಿದನಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದ್ರೆ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಜೀವನ ಚರಿತ್ರೆ ಎಮ್.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ.
ಈ ಸಿನಿಮಾಗಾಗಿ ಸುಶಾಂತ್ ಸಿಂಗ್ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರು. ಧೋನಿಯ ಪಾತ್ರವನ್ನು ನಿಭಾಯಿಸಬೇಕಾಗಿರುವುದರಿಂದ ಸುಶಾಂತ್ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಚಿತ್ರದ ನಿರ್ದೇಶಕ ನೀರಜ್ ಪಾಂಡೆ ಮತ್ತು ನಿರ್ಮಾಪಕ ಅರುಣ್ ಪಾಂಡೆ ಕೂಡ ಸುಶಾಂತ್ ಪಟ್ಟಿರುವ ಶ್ರಮವನ್ನು ನೆನಪು ಮಾಡಿಕೊಂಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ಮನವಿಯಂತೆ ಭಾರತ
ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೊರೆ ಅವರು ಸುಶಾಂತ್‍ಗೆ ವಿಕೆಟ್ ಕೀಪಿಂಗ್ ಮತ್ತು ಧೋನಿಯ ಬ್ಯಾಟಿಂಗ್ ಶೈಲಿಯ ಬಗ್ಗೆ ತರಬೇತಿ ನೀಡಿದ್ದರು.
ಕಿರಣ್ ಮೊರೆ ಸುಶಾಂತ್ ಅವರ ಬದ್ಧತೆ, ಪರಿಶ್ರಮ ಮತ್ತು ಧೋನಿ ಪಾತ್ರಕ್ಕೆ ಜೀವ ತುಂಬಲು ಎಷ್ಟೇಲ್ಲಾ ಕಷ್ಟಪಟ್ಟಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಮುಂಬೈನ ಬಿಕೆಸಿ ಬಾಂದ್ರಾದಲ್ಲಿ ಸುಶಾಂತ್‍ಗೆ ತರಬೇತಿ ನೀಡುತ್ತಿದ್ದರು. ಆಗ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಸಚಿನ್ ತೆಂಡುಲ್ಕರ್ ಕಣ್ಣಿಗೂ ಬಿದ್ದಿದ್ದರು. ಆಗ ಸುಶಾಂತ್ ಅವರ ಬ್ಯಾಟಿಂಗ್ ಅನ್ನು ನೋಡಿದ್ದ ಸಚಿನ್ ಅಚ್ಚರಿಗೊಂಡಿದ್ದರು ಎಂಬ ವಿಷಯವನ್ನು ಕಿರಣ್ ಮೊರೆ ಹೇಳಿದ್ದಾರೆ.
ನನಗೆ ಇನ್ನೂ ನೆನಪಿದೆ. ಸುಶಾಂತ್ ಬ್ಯಾಟಿಂಗ್ ವೈಖರಿಯನ್ನು ನೋಡಿದ್ದ ಸಚಿನ್ ತೆಂಡುಲ್ಕರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ನಾನು ಧೋನಿಯ ಜೀವನ ಚರಿತ್ರೆಯ ಎಮ್.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಧೋನಿಯ ವಿಕೆಟ್ ಕೀಪಿಂಗ್ ಶೈಲಿ, ಬ್ಯಾಟಿಂಗ್ ಶೈಲಿ, ಧೋನಿಯ ಸಿಗ್ನೇಚರ್ ಶಾಟ್ಸ್ ಹೆಲಿಕಾಪ್ಟರ್ ಶಾಟ್ಸ್ ಸೇರಿದಂತೆ ಧೋನಿಯ ಹಾವಭಾವಗಳ ಬಗ್ಗೆ ಸುಶಾಂತ್‍ಗೆ ಹೇಳಿಕೊಡುವ ಅವಕಾಶ ಸಿಕ್ಕಿತ್ತು. ಆಗ ಸಚಿನ್ ತೆಂಡುಲ್ಕರ್ ಬಿಕೆಸಿ ಬಾಂದ್ರ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಿಂತುಕೊಂಡು ಸುಶಾಂತ್ ಬ್ಯಾಟಿಂಗ್ ಅನ್ನು ಗಮನಿಸುತ್ತಿದ್ದರು ಅಂತ ಹೇಳ್ತಾರೆ ಕಿರಣ್ ಮೊರೆ.
ನೆಟ್ಸ್ ಅಭ್ಯಾಸ ಮುಗಿದ ನಂತರ ನಾನು ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದೆ. ಆಗ ತೆಂಡುಲ್ಕರ್ ಕೇಳಿದ್ದರು. ಯಾರು ಈ ಹುಡುಗ ? ಆತ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾನೆ ಅಂತ ನನ್ನಲ್ಲಿ ಹೇಳಿದ್ದರು. ಅದಕ್ಕೆ ನಾನು ಆತ ನಟ. ಸುಶಾಂತ್ ಸಿಂಗ್ ರಜಪೂತ್. ಧೋನಿಯ ಜೀವನಾಧರಿತ ಚಿತ್ರಕ್ಕೆ ಆತ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಅಂತ ಹೇಳಿದ್ದೆ. ಆಗ ತೆಂಡುಲ್ಕರ್ ನಿಜಕ್ಕೂ ಶಾಕ್ ಆಗಿದ್ದರು. ಆತ ವೃತ್ತಿಪರ ಕ್ರಿಕೆಟಿಗನಂತೆ ಆಡುತ್ತಿದ್ದಾನೆ. ಆತ ಬಯಸಿದ್ರೆ ಆತ ಕ್ರಿಕೆಟಿಗನಾಗಬಹುದು ಎಂದು ತೆಂಡುಲ್ಕರ್ ಹೇಳಿರುವುದನ್ನು ಕಿರಣ್ ಮೊರೆ ನೆನಪಿಸಿಕೊಂಡಿದ್ದಾರೆ.








