ಕೊರೊನಾ ವಿರುದ್ಧ ಹೋರಾಡಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೈ ಜೋಡಿಸಿದ್ದು, ಇತ್ತೀಚೆಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಜೊತೆಗೆ 5 ಸಾವಿರ ಬಡವರಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸಂಕಷ್ಟದಲ್ಲಿರುವ 4 ಸಾವಿರ ಕೂಲಿ ಕಾರ್ಮಿಕರಿಗೆ ಸಚಿನ್ ನೆರವು ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಹೈಫೈವ್ ಫೌಂಡೇಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಚಿನ್ ಅವರ ಸಹಾಯವನ್ನು ಸ್ಮರಿಸಿದ್ದು, ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯವಾಗಿದೆ’ ಎಂದು ತಿಳಿಸಿದ್ದಾರೆ.
ಹೈಫೈವ್ ಫೌಂಡೇಷನ್ ಮಾಡಿರುವ ಟ್ವೀಟ್ ಗೆ ಸಚಿನ್ ತೆಂಡೂಲ್ಕರ್ ರಿಟ್ವೀಟ್ ಮಾಡಿದ್ದು, ‘ದಿನಗೂಲಿ ಕಾರ್ಮಿಕರ ಕುಟುಂಬಕ್ಕೆ ನೆರವಾಗುತ್ತಿರುವ ಹೈಫೈವ್ ಫೌಂಡೇಷನ್ ಗೆ ಒಳ್ಳೆಯದಾಗಲಿ’ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.








