ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮುಡಿಗೆ ಮಗದೊಂದು ಗರಿ ಸೇರ್ಪಡೆಯಾಗಿದೆ. 2011 ಏಕದಿನ ವಿಶ್ವಕಪ್ ಗೆಲುವಿನ ಸಾಧನೆಗಾಗಿ 2000ದಿಂದ 2020ನೇ ಇಸವಿಯ ವರೆಗಿನ ‘ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿ’ಗೆ ಸಚಿನ್ ಭಾಜನವಾಗಿದ್ದಾರೆ. ಜರ್ಮನಿಯ ಬರ್ಲಿನ್‌ನ ನಡೆದ ಅದ್ಧೂರಿ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವ್ಹಾ ಪ್ರಶಸ್ತಿ ನೀಡಿ ಗೌರವಿಸಿದರು.
ಇನ್ನು ಪ್ರಶಸ್ತಿ ಸ್ವೀಕರಿಸಿದ ನಂತರ ಭಾರತ ದೇಶದ ಬಗ್ಗೆ ಸಚಿನ್ ಅದ್ಭುತ ಮಾತುಗಳನ್ನಾಡಿದ್ದಾರೆ. “ಇದು ನಿಜಕ್ಕೂ ಅದ್ಭುತ. ವಿಶ್ವಕಪ್ ಗೆಲುವಿನ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಇಡೀ ದೇಶವೇ ಜೊತೆಯಾಗಿ ಸಂಭ್ರಮಿಸುವುದು ಅತಿ ವಿರಳ. ಇವೆಲ್ಲವೂ ಕ್ರೀಡೆ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ತೋರಿಸುತ್ತದೆ, ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಿದೆ. ಈಗಲೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ” ಎಂದರು.
ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದ್ದು, ಕ್ರೀಡಾ ಪ್ರಪಂಚದ ವ್ಯಕ್ತಿಗಳು ಹಾಗೂ ತಂಡಗಳ ಕ್ರೀಡಾ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.








