ರಸಗೊಬ್ಬರ ಬೆಲೆ ಏರಿಕೆ : ನಾಳೆ ರಸಗೊಬ್ಬರ ಕಂಪನಿಗಳ ಜೊತೆ ಸದಾನಂದ ಗೌಡ ಸಭೆ
ನವದೆಹಲಿ : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಸೋಮವಾರ ಇಲ್ಲಿ ರಸಗೊಬ್ಬರ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಯೂರಿಯಾ ಹೊರತಾದ ವಿವಿಧ ನಮೂನೆಯ ಪೋಷಕಾಂಶ ರಸಗೊಬ್ಬರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ಕರೆದಿರುವ ಈ ಸಭೆಗೆ ಮಹತ್ವ ಬಂದಿದೆ.
ಭಾರತವು ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಬಹುತೇಕವಾಗಿ ಆಮದು ಮಾಡಿಕೋಳ್ಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಉತ್ಪಾದನಾ ವೆಚ್ಚವೂ ಅದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಎಲ್ಲ ರಸಗೊಬ್ಬರ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಿವೆ. ಆದಾಗ್ಯೂ, ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡುವಂತೆ ರಸಗೊಬ್ಬರ ಕಂಪನಿಗಳು ಹಾಗೂ ಆಮದುದಾರರ ಮನ ಒಲಿಸಲು ಕೇಂದ್ರ ಸರ್ಕಾರವು ತೀವ್ರ ಪ್ರಯತ್ನ ನಡೆಸಿದೆ.
ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಸದಾನಂದ ಗೌಡ ಅವರು ಸಾರ್ವಜನಿಕ ವಲಯದ ರಸಗೊಬ್ಬರ ಕಂಪನಿಗಳ ಹೊರತಾಗಿ ಸಹಕಾರಿ ವಲಯದ ಇಫ್ಕೋ ಕಂಪನಿಯು ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿದ್ದು ಈಗಾಗಲೇ ತನ್ನ ನಿರ್ಧಾರವನ್ನು ಕಾರ್ಯಗತಗೊಳಿಸಿದೆ ಎಂದರು.
ದೇಶದಲ್ಲಿ ಹಳೆ ದಸ್ತಾನು ಸುಮಾರು ಒಂದುವರೆ ತಿಂಗಳಿಗೆ ಸಾಕಾಗುವಷ್ಟಿದೆ. ಇಫ್ಕೋ ಬಳಿ 11.26 ಲಕ್ಷ ಟನ್ ಎನ್ಪಿಕೆ, ಡಿಏಪಿ ಮತ್ತಿತರ ನಮೂನೆಯ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೆ ದಸ್ತಾನು ಇದೆ. ರಾಜ್ಯದಲ್ಲಿಯೇ1.22 ಲಕ್ಷ ಟನ್ ದಾಸ್ತಾನಿದೆ. 50 ಕೆಜಿ ಡಿಎಪಿ ಮೂಟೆಯೊಂದಕ್ಕೆ 1200 ರೂಗೆ (ಹಳೆ ದರ) ಮಾರಾಟಮಾಡಲಾಗುತ್ತಿದೆ. ಅದೇ ರೀತಿ ‘ಎನ್ಪಿಕೆ-10-26-26’ ನಮೂನೆ ರಸಗೊಬ್ಬರ ಮೂಟೆಗೆ 1175 ರೂ, ‘ಎನ್ಪಿಕೆ-12-32-16’ಗೆ 1185 ರೂ, ‘ಎನ್ಪಿ-20-20.0.13’ಗೆ 925 ರೂ ಹಾಗೂ 15:15:15 ನಮೂನೆ ರಸಗೊಬ್ಬರಕ್ಕೆ 1025 ರೂ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹಳೆದಾಸ್ತಾನು ಮುಗಿಯುವ ತನಕ ಹಳೆ ದರವೇ ಇರಲಿದ್ದು ರೈತರು ಇದರ ಉಪಯೋಗ ಪಡೆಯಬೇಕಿದೆ ಎಂದರು.
ದೇಶದ ವಿವಿಧ ರಾಜ್ಯಗಳ ಬೇಡಿಕೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಆಗುವಂತೆ ಇಲಾಖೆಯು ಮೇಲುಸ್ತುವಾರಿ ವಹಿಸುತ್ತದೆಯಾದರೂ ಇದು ಅನಿಯಂತ್ರಿತ ವಲಯದಲ್ಲಿರುವುದರಿಂದ ಬೆಲೆ ನಿಗದಿ ಪಡಿಸುವಲ್ಲಿ ಸರ್ಕಾರದ ನೇರ ಪಾತ್ರವೇನೂ ಇರುವುದಿಲ್ಲ. ಆದಾಗ್ಯೂ ರಸಗೊಬ್ಬರ ಕಂಪನಿಗಳು ಗರಿಷ್ಠ ಮಾರಾಟ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಮನಬಂದಂತೆ ಏರಿಸದಂತೆ ಸರ್ಕಾರ ನಿಗಾವಹಿಸುತ್ತದೆ. ಕಂಪನಿಗಳು ಪ್ರಮಾಣಿಕೃತ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ನಿಗದಿತ ಪ್ರಮಾಣದಲ್ಲಿಯಷ್ಟೇ ಲಾಭಾಂಶ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳಬೇಕೆಂದರೆ ಗರಿಷ್ಠ ಮಾರಾಟ ಬೆಲೆ ಉತ್ಪಾನಾ ವೆಚ್ಚದ ಮೇಲೆ ಅವಲಂಬಿಸಿದೆ.
ರೈತರಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಸಗೊಬ್ಬರಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತದೆ. ಇದಕ್ಕಾಗಿ ಪ್ರತಿವರ್ಷ ಸರಾಸರಿ ಏನಿಲ್ಲವೆಂದರೂ 75000 ಕೋಟಿ ರೂಪಾಯಿ ಒದಗಿಸುತ್ತದೆ. ಉದಾಹರಣೆಗೆ ಪೋಷಕಾಂಶ ಆಧಾರಿತ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ‘ನೈಟ್ರೋಜನ್’ಗೆ ಟನ್ ಒಂದಕ್ಕೆ 18,789 ರೂ ಸಬ್ಸಿಡಿ ಒದಗಿಸಲಾಗುತ್ತಿದೆ. ಅದೇ ರೀತಿ ‘ಫೊಸ್ಫೇಟ್’ಗೆ (ಒಂದು ಟನ್ ಗೆ) 14,888 ರೂ, ‘ಫೊಟಾಷ್’ಗೆ 10,116 ರೂ ಹಾಗೂ ‘ಸಲ್ಫರ್’ಗೆ 2,374 ರೂ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಸದಾನಂದ ಗೌಡ ವಿವರಿಸಿದರು.
ನಮ್ಮ ರಸಗೊಬ್ಬರ ಇಲಾಖೆಯು ಕಳೆದ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ದೇಶದ ಯಾವುದೇ ಭಾಗದಲ್ಲಿಯೂ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಂಡಿತು. ಯೂರಿಯಾ ಮತ್ತಿತರ ನಮೂನೆಯ ರಸಗೊಬ್ಬರಗಳ ಮಾರಾಟದಲ್ಲಿ ಶೇಕಡಾ 17ರಿಂದ ಶೇಕಡಾ 42ರಷ್ಟು ಹೆಚ್ಚಳ ಕಂಡುಬಂತು. ಇದರಿಂದ ರೈತರು ಬಂಪರ್ ಬೆಳೆ ಬೆಳೆಯಲು ಸಾಧ್ಯವಾಯಿತು. ಮುಂಬರುವ ಮುಂಗಾರು ಬೆಳೆ ಹಂಗಾಮಿನಲ್ಲಿಯೂ ರಸಗೊಬ್ಬರ ಸರಬರಾಜಿನಲ್ಲಿ ಸ್ವಲ್ಪವೂ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಕೃಷಿ ಇಲಾಖೆ ಈಗಾಗಲೇ ಮುಂಗಾರು ಹಂಗಾಮಿಗೆ ಎಷ್ಟು ರಸಗೊಬ್ಬರ ಬೇಕು ಎಂಬ ಬಗ್ಗೆ ಬೇಡಿಕೆ ಸಲ್ಲಿಸಿದೆ. ಇದಕ್ಕೆ ಅನುಗುಣವಾಗಿ ಸರಬರಾಜು ಮಾಡಲು ತಯಾರಿ ಆರಂಭಿಸಲಾಗಿದೆ. ಸೋಮವಾರದ ಸಭೆಯಲ್ಲಿಯೂ ಈ ವಿಷಯ ಮತ್ತೊಮ್ಮೆ ಚರ್ಚೆಯಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.