ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲು ಸೈನಾ ಹರಸಾಹಸ.
ಸದ್ಯ 20ನೇ ರ್ಯಾಂಕಿಂಗ್‍ನಲ್ಲಿರುವ ಸೈನಾ ನೆಹ್ವಾಲ್.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ಭಾರತದ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಇದ್ರಿಂದ ಸೈನಾ ನೆಹ್ವಾಲ್ ಅವರು ಮುಂಬರುವ ಒಲಿಂಪಿಕ್ಸ್ ಅರ್ಹತೆ ಪಡೆಯುವ ಅವಕಾಶಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಹೋರಾಟವನ್ನು ಕೇವಲ 28 ನಿಮಿಷಗಳಲ್ಲಿ ಮುಗಿಸಿದ್ರು. ಮೂರನೇ ಶ್ರೇಯಾಂಕಿತೆ ಜಪಾನ್‍ನ ಆಕಾನೆ ಯಮಗುಚಿ ವಿರುದ್ಧ 11-21, 8-21ರಿಂದ ಪರಾಭವಗೊಂಡರು. ಅಂದ ಹಾಗೇ ಸೈನಾ ನೆಹ್ವಾಲ್, ಯಮಗುಚಿ ವಿರುದ್ಧ 9ನೇ ಬಾರಿ ಸೋಲು ಅನುಭವಿಸಿದ್ದಾರೆ. ಒಟ್ಡಾರೆ ಯಮಗುಚಿ ಮತ್ತು ಸೈನಾ ನೆವಾಲ್ 11 ಬಾರಿ ಮುಖಾಮುಖಿಯಾಗಿದ್ರು. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೈನಾ ನೆಹ್ವಾಲ್ ಗೆಲುವಿನ ನಗೆ ಬೀರಿದ್ದರು. ಹಾಗೇ ಈ ಋತುವಿನ ಟೂರ್ನಿಗಳಲ್ಲಿ ಮೂರನೇ ಬಾರಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ.
29ರ ಹರೆಯದ ಸೈನಾ ನೆಹ್ವಾಲ್, ಮುಂದಿನ ದಿನಗಳಲ್ಲಿ ಸ್ವಿಸ್ ಓಪನ್, ಇಂಡಿಯಾ ಓಪನ್ ಹಾಗೂ ಮಲೇಶಿಯಾ ಓಪನ್ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲೇಬೇಕು.
ಸದ್ಯ 20ನೇ ರ್ಯಾಂಕಿಂಗ್ ನಲ್ಲಿರುವ ಸೈನಾ ನೆಹ್ವಾಲ್, ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಬೇಕಾದ್ರೆ 16ನೇ ರ್ಯಾಂಕಿಂಗ್ ಅನ್ನು ಗಿಟ್ಟಿಸಿಕೊಳ್ಳಲೇಬೇಕು. ಹೀಗಾಗಿ ಮುಂಬರುವ ಮೂರು ಟೂರ್ನಿಗಳು ಸೈನಾ ನೆಹ್ವಾಲ್ ಅವರ ಒಲಿಂಪಿಕ್ಸ್ ಅರ್ಹತೆಯ ಭವಿಷ್ಯವನ್ನು ನಿರ್ಧರಿಸಲಿವೆ.








