ಉಡುಪಿ, ಮೇ 14 : ಷರತ್ತು ಬದ್ದ ಅನುಮತಿ ಮೇರೆಗೆ ಮೇ 18ರಿಂದ ಉಡುಪಿ ಜಿಲ್ಲೆಯಲ್ಲಿ ಸೆಲೂನು ಪುನರಾರಂಭವಾಗಲಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.
ಜಿಲ್ಲಾ ಸವಿತಾ ಸಮಾಜದ ನಿಯೋಗವು ಮೇ 13ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸಿತ್ತು. ಇದೀಗ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲ್ಯಾನ್ ಆದಿಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಯು.ಶಂಕರ್ ಸಾಲ್ಯಾನ್ ಕಟಪಾಡಿ ಉಪಸ್ಥಿತರಿದ್ದರು.
ಷರತ್ತುಗಳು :
ಫೋನ್ ಮುಖಾಂತರ ಗ್ರಾಹಕರು ಸಮಯ ನಿಗದಿಪಡಿಸಿ, ನಿಗದಿತ ಸಮಯಕ್ಕೆ ಕ್ಷೌರ ಮಾಡಿಸಲು ಬಂದರೆ ಒಳ್ಳೆಯದು.
ಯಾವುದೇ ಸೆಲೂನ್ ಗಳಲ್ಲಿ ಎಸಿ ಬಳಸುವಂತಿಲ್ಲ.
ಗ್ರಾಹಕರು ಮತ್ತು ಕ್ಷೌರಿಕರ ನಡುವೆ ಎರಡು ಫೀಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಗ್ರಾಹಕರಿಗೆ ಸೇವೆ ನೀಡುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ಗಳನ್ನು ಅಳವಡಿಸಿಕೊಳ್ಳಬೇಕು.
ಸೆಲೂನ್ ಅಂಗಡಿಗಳು ಸ್ವಚ್ಚತೆ ಕಾಪಾಡಿಕೊಳ್ಳಬೇಕು.
ಗ್ರಾಹಕರಿಗೆ ಬಂದ ತತ್ ಕ್ಷಣ ಸ್ಯಾನಿಟೈಸರ್‌ನಲ್ಲಿ ಕೈಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಬೇಕು.
ಗ್ರಾಹಕರಿಗೆ ಸೇವೆ ನೀಡಿದ ಬಳಿಕ ಸಾಬೂನಿನಲ್ಲಿ ಕೈ ತೊಳೆಯಬೇಕು.
ಸೆಲೂನ್ ನಲ್ಲಿ ಇಬ್ಬರು ಕ್ಷೌರಿಕರು ಮಾತ್ರ ಸೇವೆ ನೀಡಬೇಕು ಮತ್ತು ಕುರ್ಚಿ ಗಳ ಅಂತರ ಒಂದು ಮೀಟರ್‌ನಷ್ಟು ದೂರ ಇರಬೇಕು.
ಒಬ್ಬ ಗ್ರಾಹಕರಿಗೆ ಉಪಯೋಗಿಸಿದ ಬಟ್ಟೆಗಳನ್ನು ಸ್ವಚ್ಛಗೊಳಿಸದೇ ಮತ್ತೊಬ್ಬರಿಗೆ ಬಳಸುವಂತಿಲ್ಲ
ಸವಿತಾ ಸಮಾಜದ ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರಬೇಕು.








