ಅರಣ್ಯ, ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಒಲವಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ಗೆಳೆಯರ ಜೊತೆಗೆ ಕಾಡುಮೇಡು ಸುತ್ತಾಡುತ್ತಿರುತ್ತಾರೆ. ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದಚ್ಚು ಅವರಿಗೆ ಕಾಡಿನ ಬಗ್ಗೆ ಮಾಹಿತಿ ಕಲೆಹಾಕುವುದು, ವನ್ಯಜೀವಿಗಳ ಫೋಟೋ ತೆಗೆಯುವುದು ಅಚ್ಚುಮೆಚ್ಚಿನ ಹಾಬಿಯಾಗಿದೆ. ಇತ್ತೀಚೆಗಷ್ಟೇ ಕಳೆದ ತಿಂಗಳು ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ದರ್ಶನ್ ಅವರು ಚಿಕ್ಕಣ್ಣ ಅವರೊಂದಿಗೆ ಭೇಟಿ ನೀಡಿ ಕಳ್ಳಬೇಟೆ ತಡೆ ಶಿಬಿರಕ್ಕೆ ತೆರಳಿ, ಸಸಿ ನೆಟ್ಟು ಅರಣ್ಯ ಸಪ್ತಾಹ ಯೋಜನೆಗೆ ಚಾಲನೆ ನೀಡಿದ್ದರು.
ಇದಾದ ಬಳಿಕ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಕಾಲ ಕಳೆದಿದ್ದ ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತೆ ಪ್ರಕೃತಿಯ ಜತೆಗಿನ ಒಡನಾಟಕ್ಕೆ ಮರಳಿದ್ದಾರೆ. ವನ್ಯ ಸಂಪತ್ತು ಬೆಳೆಸುವ ಉದ್ದೇಶದಿಂದ ಅರಣ್ಯ ಪ್ರದೇಶಗಳಿಗೆ ಸಾಲು ಸಾಲು ಭೇಟಿ ನೀಡುವ ದರ್ಶನ್ ಇದೀಗ ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯಕ್ಕೆ ಚಿಕ್ಕಣ್ಣ ಮತ್ತು ತಮ್ಮ ಸ್ನೇಹಿತರ ಜತೆಗೆ ಭೇಟಿ ನೀಡಿದ್ದಾರೆ. ಶಿವಮೊಗ್ಗ ಸೇರಿದಂತೆ ವಿವಿಧೆಡೆ ಭಾರೀ ಮಳೆ ಸುರಿಯುತ್ತಿದ್ದು, ಭದ್ರಾ ಡ್ಯಾಂ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿರುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. 
ಶುಕ್ರವಾರ ಮಧ್ಯಾಹ್ನ ಭದ್ರಾ ಜಲಾಶಯ ವೀಕ್ಷಿಸಿದ ಬಳಿಕ ಬಿಆರ್ ಪ್ರಾಜೆಕ್ಟ್‌ನಲ್ಲಿರುವ ಅರಣ್ಯ ಇಲಾಖೆ ಜಂಗಲ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ದರ್ಶನ್ ಇಂದು ಭದ್ರಾ ಅಭಯಾರಣ್ಯದಲ್ಲಿ ಮತ್ತು ಸ್ನೇಹಿತರ ಜೊತೆಗೆ ಸಫಾರಿಗೆ ತೆರಳಲಿದ್ದಾರೆ. ಇದರ ಹೊರತಾಗಿ ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಳ್ಳಲಿರುವ ದಚ್ಚು ಇನ್ನೂ 2 -3 ದಿನಗಳ ಕಾಲ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾಡಿನಲ್ಲಿ ವನ್ಯಜೀವಿಗಳ ಫೋಟೋ ಶೂಟ್ ನಡೆಸಲಿದ್ದಾರೆ ದಚ್ಚು. ದರ್ಶನ್ ಅವರಿಗೆ ಅರಣ್ಯ ಇಲಾಖೆಯ ಐಬಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.








