ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ – ಲೂಸ್ ಮಾದ ಮತ್ತು ಕ್ರಿಕೆಟಿಗ ಅಯ್ಯಪ್ಪ ರ ವಿಚಾರಣೆ – ಸಾಕಷ್ಟು ಮಾಹಿತಿ ಲಭ್ಯ
ಬೆಂಗಳೂರು, ಸೆಪ್ಟೆಂಬರ್21: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತೀವ್ರ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಐಎಸ್’ಡಿ ಕೂಡಾ ತನಿಖೆಯನ್ನು ತೀವ್ರಗೊಳಿಸಿದೆ.
ಈಗಾಗಲೇ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು ಲೂಸ್ ಮಾದ ಖ್ಯಾತಿಯ ನಟ ಯೋಗಿ ಮತ್ತು ಮಾಜಿ ಕ್ರಿಕೆಟಿಗ ಎನ್ಸಿ ಅಯ್ಯಪ್ಪ ಅವರನ್ನು ಕೂಡ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಎನ್ಸಿ ಅಯ್ಯಪ್ಪ, ಎರಡು ದಿನಗಳ ಹಿಂದೆ ಐಎಸ್ ಡಿ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಹೇಳಿತ್ತು. ಅದರಂತೆ ನಾನು ಇಂದು ಐಎಸ್‍ಡಿ ಕಚೇರಿಗೆ ಹೋಗಿ ವಿಚಾರಣೆ ಮುಗಿಸಿ ಬಂದಿದ್ದೇನೆ. ಅಧಿಕಾರಿಗಳು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು ಎಂದು ಹೇಳಿ ಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಮಾದಕ ಜಾಲ- ಪ್ರಶಾಂತ್ ಸಂಬರಗಿಯಿಂದ ಮತ್ತೊಂದು ಸ್ಪೋಟಕ ಮಾಹಿತಿ
ಚಿತ್ರನಟ ಯೋಗಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಯೋಗಿ ಕಡೆಯಿಂದ ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿ ರಾಗಿಣಿ ಮತ್ತು ಸಂಜನಾ ಜೊತೆಗೂ ಯೋಗಿ ಲಿಂಕ್ ಹೊಂದಿದ್ದಾರೆ ಎಂಬುವುದಕ್ಕೆ ಪುರಾವೆಗಳು ದೊರಕಿವೆ ಎಂದು ಹೇಳಲಾಗಿದೆ. ಡ್ರಗ್ಸ್ ಪೆಡ್ಲರ್ ನೀಡಿದ ಮಾಹಿತಿ ಮೇಲೆ ವಿಚಾರಣೆ ನಡೆಸಲಾಗಿದೆ.
ಈ ಬಗ್ಗೆ ಐಎಸ್‍ಡಿ (ಆಂತರಿಕ ಭದ್ರತಾ ಪಡೆ) ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಲೂಸ್ ಮಾದ ಯೋಗಿ ಹಾಗೂ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆಯ ಆಧಾರದ ಮೇರೆಗೆ ಈ ವಿಚಾರಣೆ ನಡೆಸಲಾಗಿದೆ. ಈ ವೇಳೆ ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗಿದ್ದು, ತನಿಖಾ ಹಂತದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿ ಮುಗಿಸಿದ್ದೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ








