ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿನ ಬಗ್ಗೆ ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್‍ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ನಾಳೆ ಬೆಳಿಗ್ಗೆ 11.30ಕ್ಕೆ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ನೀಡಿದ ನೋಟಿಸ್‍ನಲ್ಲಿ ಸೂಚಿಸಲಾಗಿದೆ. ಡ್ರಗ್ಸ್ ಜಾಲದ ಬಗ್ಗೆ ಸುಮೊಟೋ ಕೇಸ್ ದಾಖಲು ಮಾಡಿಕೊಂಡಿರುವ ಸಿಸಿಬಿ ಪೊಲೀಸರು, ಇಂದ್ರಜಿತ್ ಲಂಕೇಶ್‍ರಿಂದ ಹಲವು ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ.
ಸ್ಯಾಂಡಲ್‍ವುಡ್‍ನಲ್ಲಿ ಎಷ್ಟು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ, ದಂಧೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ನಿಮ್ಮ ಬಳಿ ಯಾವೆಲ್ಲಾ ಸಾಕ್ಷಿಗಳಿವೆ, ಗೊತ್ತಿದ್ದರೂ ಯಾಕೆ ಮಾಹಿತಿ ನೀಡಿಲ್ಲ. ಹೇಳಿಕೆ ಕೊಟ್ಟ ಮೇಲೆ ನಿಮಗೆ ಜೀವ ಬೆದರಿಕೆ ಇದೆಯಾ ಸೇರಿದಂತೆ ಹಲವು ಪ್ರಶ್ನೆಗಳನ್ನು ಇಂದ್ರಜಿತ್ ಲಂಕೇಶ್ ಮುಂದೆ ಸಿಸಿಬಿ ಪೊಲೀಸರು ಮುಂದಿಡಲಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡ್ರಗ್ಸ್ ಕರಾಳ ದಂಧೆ ಬಗ್ಗೆ ಇಂದ್ರಜಿತ್ ಲಂಕೇಶ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅವರು ಏನು ಮಾಹಿತಿ ಕೊಡ್ತಾರೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








