ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ ‘ವಿಕಿಪೀಡಿಯ’ ಸಿನಿಮಾ…ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕಿಸಿಕೊಂಡು ಯಶವಂತ್
ಒಂದೊಳ್ಳೆ ಕಂಟೆಂಟ್, ಕ್ಷಣ ಕ್ಷಣಕ್ಕೂ ಚಕಿತಗೊಳಿಸುವ ಅಂಶಗಳ ಮೂಲಕ ಪ್ರೇಕ್ಷಕರನ್ನು ವಿಕಿಪೀಡಿಯ ಸಿನಿಮಾ ಆವರಿಸಿಕೊಳ್ಳುತ್ತಿದೆ. ಚಿತ್ರವನ್ನು ನೋಡಿದವರೆಲ್ಲರೂ ಅಪ್ಪಿ ಒಪ್ಪಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದೇ 26ರಂದು ಬೆಳ್ಳಿತೆರೆ ಬಾನಂಗಳದಲ್ಲಿ ದಿಬ್ಬಣ ಹೊರಟ ಈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ವಿಕಿಪೀಡಿಯ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಇಂದಿನ ಯುವಕ ಪೀಳಿಗೆಯ ಸುತ್ತ ಸಾಗುವ ಅಂಶಗಳನ್ನೊಳಗೊಂಡ ಈ ಚಿತ್ರ ಎಲ್ಲಾ ವರ್ಗದ ಜನರನ್ನು ಮನರಂಜಿಸುತ್ತಿದೆ. ಫ್ರೆಂಡ್ಸ್, ಫ್ಯಾಮಿಲಿ, ಲವ್, ಲೈಫ್ ಸ್ಟೈಲ್, ಕಮಿಟ್‌ಮೆಂಟ್ ಹೀಗೆ ಹತ್ತಾರು ವಿಷಯಗಳನ್ನೊಳಗೊಂಡ ನವಿರಾದ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಕ ಸೋಮು ಹೊಯ್ಸಳ ಕಟ್ಟಿಕೊಟ್ಟಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವ ಯಶವಂತ್ ಅಭಿನಯ ನೋಡುಗರ ಗಮನಸೆಳೆಯುವಂತಿದೆ. ಮೊದಲ ಹೆಜ್ಜೆಯಲ್ಲಿ ಯಶವಂತ್ ಗೆಲುವಿನ ದಡ ಮುಟ್ಟಿದ್ದಾರೆ. ಆಶಿಕಾ ಸೋಮಶೇಖರ್ ಮತ್ತು ಪೋಷಕ ಪಾತ್ರದಲ್ಲಿ ಮಂಜುನಾಥ್ ಹೆಗ್ಡೆ ಮನೋಜ್ಞವಾಗಿ ನಟಿಸಿದ್ದಾರೆ.
ರಫ್ ಕಟ್ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ವಿಕಿಪೀಡಿಯ ಸಿನಿಮಾಗೆ ಚಿದಾನಂದ್ ಎಚ್.ಕೆ. ಛಾಯಾಗ್ರಹಣ, ರಾಕೇಶ್ ಮತ್ತು ನೀಲಿಮ ಸಂಗೀತ, ರವಿಚಂದ್ರನ್ ಸಿ ಸಂಕಲನವಿದೆ. ಯಾವುದೇ ಒಂದು ಸಿನಿಮಾ ಎಲ್ಲಾ ಪ್ರಚಾರ ಆಚೆಗೂ ನೋಡುಗರ ಅಭಿಪ್ರಾಯದಿಂದಲೇ ಮನ ಸೆಳೆಯುವುದು. ಅದರಂತೆ ವಿಕಿಪೀಡಿಯ ಸಿನಿಮಾ ಕೂಡ ನೋಡುಗರನ್ನು ಆಕರ್ಷಿಸುತ್ತಿದೆ.