ಬೆಳಗಾವಿ: ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ರಾಯಣ್ಣ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ರಾಯಣ್ಣ ಅಭಿಮಾನಿಗಳ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಸುವರ್ಣಸೌಧದದಿಂದ ಡಿಸಿ ಕಚೇರಿಯತ್ತ ಹೊರಟಿದ್ದ ರಾಯಣ್ಣ ಅಭಿಮಾನಿಗಳು ಹಾಗೂ ಪ್ರತಿಭಟನಾಕಾರರನ್ನು ಯಡಿಯೂರಪ್ಪ ಮಾರ್ಗದಲ್ಲಿ ಪೆÇಲೀಸರು ತಡೆದಿದ್ದರು. ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಕೆಲ ರಾಯಣ್ಣ ಅಭಿಮಾನಿಗಳ ಜತೆ ರಮೇಶ್ ಜಾರಕಿಹೊಳಿ ಸಭೆ ನಡೆಸಿದರು. ಸಭೆ ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಆದರೆ ಹೋರಾಟಗಾರರು ಸಚಿವ ಜಾರಕಿಹೊಳಿ ಮುಂದೆ ಎರಡು ಬೇಡಿಕೆ ಮುಂದಿಟ್ಟರು.
ಮೊದಲ ಬೇಡಿಕೆ-ಪೀರನವಾಡಿಯಲ್ಲಿ ತೆರವಾದ ಸ್ಥಳದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಬೇಕು.
ಎರಡನೇ ಬೇಡಿಕೆ-ಬೆಳಗಾವಿ ಸುವರ್ಣ ವಿಧಾನಸೌಧ ಮುಂದೆ ರಾಯಣ್ಣ ಮೂರ್ತಿ ಸ್ಥಾಪಿಸಬೇಕು.
ಹೋರಾಟಗಾರರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಸಿಎಂ ಬಿಎಸ್ವೈ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಿರಿಯ ನಾಯಕರು ಮತ್ತು ಕುರುಬ ಸಮುದಾಯದ ಮುಖಂಡರೊಂದಿಗೆ ಮಾತನಾಡಿರುವೆ. ಎರಡು-ಮೂರು ದಿನಗಳಲ್ಲಿ ಪೀರನವಾಡಿಯಲ್ಲಿ ಮೂರ್ತಿ ಸ್ಥಾಪಿಸುವ ಬಗ್ಗೆ ಒಳ್ಳೆಯ ನಿರ್ಧಾರ ಮಾಡುತ್ತೇವೆ. ಆ.29ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಬೆಳಗಾವಿಗೆ ಬರಲಿದ್ದಾರೆ. ಅವರ ಜೊತೆಗೂ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಸುವರ್ಣಸೌಧ ಮುಂದೆ ಮೂರ್ತಿ ಪ್ರತಿಷ್ಠಾಪನೆ ಬೇಡಿಕೆಯನ್ನ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವ ರಮೇಶ್ ಜಾರಕಿಹೊಳಿ ಭರವಸೆಗೆ ಮಣಿದ ಪ್ರತಿಭಟನಾಕಾರರು ಹಾಗೂ ರಾಯಣ್ಣ ಅಭಿಮಾನಿಗಳು ಆಗಷ್ಟ್ 30ರವರೆಗೂ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ.