ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ Saaksha Tv
ಮೆಲ್ಬೋರ್ನ್: ಭಾರತದ ಮಹಿಳಾ ಟೆನಿಸ್ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2022ರ ಆವೃತ್ತಿಯ ಟೆನಿಸ್ ಅವರ ಕೊನೆಯ ಟೆನಿಸ್ ವರ್ಷವಾಗಲಿದೆ. ಆಸ್ಟ್ರೇಲಿಯಾ ಓಪನ್ನ ಮಹಿಳಾ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನನ್ನ ದೇಹವು ಕ್ಷೀಣಿಸುತ್ತಿದೆ, ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ. ಆದರೆ ಅದರಿಂದಲೇ ನಾವು ಸೋತಿದ್ದೇವೆ ಎಂದು ನಾನು ಹೇಳುತ್ತಿಲ್ಲ, ನಾನು ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನಾನು ಹೋಗಿ ಆಡಬಲ್ಲೆ ಎಂದು ಹೇಳುವುದು ಸುಲಭವಲ್ಲ ಎಂದು ಹೇಳಿದರು.
ಕೊರೊನಾ ಕಠಿಣ ಸಂದರ್ಭದಲ್ಲಿ ನನ್ನ ಜೊತೆಗೆ 3 ವರ್ಷದ ಮಗನನ್ನು ಕರೆದುಕೊಂಡು ಹೋಗಿ, ಆತನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ ಎಂದೆನಿಸುತ್ತಿದೆ. ಮತ್ತು ಸದ್ಯದ ಪರಿಸ್ಥಿತಿಯಲ್ಲಿ ನಾನು ತುಂಬಾ ದೀರ್ಘಕಾಲದ ವರೆಗೆ ಟೆನಿಸ್ ಕೋರ್ಟ್‌ನಲ್ಲಿ ಎಂಜಾಯ್ ಮಾಡಲು ಸಾಧ್ಯವಾಗಲಿದೆ ಎಂದು ನನಗನಿಸುತ್ತಿಲ್ಲ ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮೆಲ್ಬೋರ್ನ್ ಪಾರ್ಕ್‌ನಲ್ಲಿ ಕೋರ್ಟ್ 5 ನಲ್ಲಿ ನಡೆದ ಸ್ಪರ್ಧೆಯ ನಂತರ ಮಿರ್ಜಾ ಹೇಳಿದ್ದಾರೆ.
ಡಬ್ಲ್ಯೂಟಿಎ ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ 30ರೊಳಗೆ ಸೇರಿದ ಭಾರತದ ಮೊದಲ ಪ್ಲೇಯರ್ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ ಈ ವರ್ಷದ ಎಲ್ಲಾ ಟೂರ್ನಮೆಂಟ್ಗಳನ್ನು ಆಡಿ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.








