ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ, ಅಕ್ರಮವಾಗಿ ಹೂಡಿಕೆ ಮಾಡಿದ ಒಂದೊಂದೇ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಸಾವಿರಾರು ಜನರಿಗೆ ಸಾವಿರಾರು ಕೋಟಿ ರೂಪಾಯಿಯಷ್ಟು ಟೋಪಿ ಹಾಕಿರುವ ಬ್ಲೇಡ್ ಕಂಪನಿ ಐಎಂಎನಲ್ಲೂ ಸಂಜನಾ ಲಕ್ಷಾಂತರ ರೂ. ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹವಾಲಾ, ಬಿಟ್ ಕಾಯಿನ್, ಕ್ಯಾಸಿನೋ ಸೇರಿದಂತೆ ಹಲವು ಅಕ್ರಮ ಹಣಕಾಸು ವ್ಯವಹಾರದಲ್ಲಿ ನಟಿ ಸಂಜನಾ ಗಲ್ರಾನಿ ಬಂಡವಾಳ ಹೂಡಿಕೆ ಮಾಡರುವ ಬಗ್ಗೆ ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇ.ಡಿ, ಸಂಜನಾಗಳ ವ್ಯವಹಾರಗಳ ಇಂಚಿಂಚೂ ಮಾಹಿತಿ ಕೆದಕಲು ಆರಂಭಿಸಿದೆ.
ಜೈಲಿನಲ್ಲಿಯೇ ಕಳೆದ ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳ ಮುಂದೆ ಸಂಜನಾ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾಳೆ. ಅದರಲ್ಲಿ ಅಧಿಕ ಬಡ್ಡಿ ಆಸೆ ತೋರಿಸಿ ನೂರಾರು ಜನರಿಗೆ ವಂಚಿಸಿದ ಐಎಂಎನಲ್ಲೂ ಹಣ ಹೂಡಿಕೆ ಮಾಡಿದ್ದಾಗಿ ಸಂಜನಾ ಒಪ್ಪಿಕೊಂಡಿದ್ದಾಳೆ.
ಐಎಂಎ ಮಾಲೀಕ ಮನ್ಸೂರ್ ಖಾನ್ನ ಬಣ್ಣದ ಮಾತುಗಳಿಗೆ ಬೆರಗಾಗಿ ಲಕ್ಷಾಂತರ ರೂ. ಹಣವನ್ನು ದಲ್ಲಾಳಿಗಳ ಮೂಲಕ ಹೂಡಿಕೆ ಮಾಡಿದ್ದಳಂತೆ. ಸಂಜನಾ ಹೂಡಿಕೆ ಮಾಡಿದ ಹಣದಲ್ಲೂ ನಯಾಪೈಸೆಯೂ ವಾಪಸ್ ಬಂದಿಲ್ಲವಂತೆ. ಅಧಿಕ ಬಡ್ಡಿ ಆಸೆಗೆ ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದೆ, ನನ್ನ ಸ್ನೇಹಿತರು ಸಹ ಹಣ ಹಾಕಿದ್ರು. ಐಎಂಎ ನಂಬಿ ಹಣ ಹಾಕಿ ಈಗ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಸಂಜನಾ ಇಡಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾಳೆ ಎನ್ನಲಾಗಿದೆ.
ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಐಎಂಎನ ನೂರಾರು ಆಸ್ತಿಯನ್ನು ಪೊಲೀಸರು ಸೀಜ್ ಮಾಡಿದ್ದು, ಸಿಬಿಐ ತನಿಖೆ ಮುಂದುವರೆದಿದೆ.